ADVERTISEMENT

ಕೊರೊನಾ ನಂತರವೂ ಮಹಿಳೆಯರ ರಕ್ಷಣೆಗೆ ಸರ್ಕಾರ ಬದ್ಧ: ಸ್ಮೃತಿ ಇರಾನಿ

ವಿಶ್ವ ಮಹಿಳಾ ವಿಚಾರ ಸಂಕಿರಣದ ವಾರ್ಷಿಕೋತ್ಸವ

ಪಿಟಿಐ
Published 2 ಅಕ್ಟೋಬರ್ 2020, 8:13 IST
Last Updated 2 ಅಕ್ಟೋಬರ್ 2020, 8:13 IST
ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ವಿಡಿಯೊ ಕಾನ್ಫರೆನ್ಸ್‌ (ವರ್ಚುವಲ್) ಮೂಲಕ ಮಾತನಾಡಿದರು. 
ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ವಿಡಿಯೊ ಕಾನ್ಫರೆನ್ಸ್‌ (ವರ್ಚುವಲ್) ಮೂಲಕ ಮಾತನಾಡಿದರು.    

ವಿಶ್ವಸಂಸ್ಥೆ: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಸರ್ಕಾರ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕೊರೊನೋತ್ತರ ಕಾಲದಲ್ಲೂ ಮಹಿಳೆ ಮತ್ತು ಮಕ್ಕಳು ಸಮಾನತೆ ಮತ್ತು ನ್ಯಾಯುತವಾಗಿ ಜೀವಿಸುವಂತಹ ವಾತಾವರಣ ನಿರ್ಮಿಸಲು ಬದ್ಧವಾಗಿದೆ‘ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಗವಾಗಿ ನಡೆಯುತ್ತಿರುವ ನಾಲ್ಕನೇ ವಿಶ್ವ ಮಹಿಳಾ ವಿಚಾರ ಸಂಕಿರಣದ25ನೇ ವಾರ್ಷಿಕೋತ್ಸವದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್‌(ವರ್ಚುವಲ್‌)ನಲ್ಲಿ ಮಾತನಾಡಿದ ಅವರು, ‘ದೇಶದ ಅಭಿವೃದ್ಧಿಯ ಪಯಣದಲ್ಲಿ ಲಿಂಗಸಮಾನತೆ ಮತ್ತು ಮಹಿಳಾ ಸಬಲೀಕರಣ ಕೇಂದ್ರೀಕೃತ ವಿಚಾರಗಳಿಗೆ ಆದ್ಯತೆ ನೀಡುತ್ತೇವೆ‘ ಎಂದು ಹೇಳಿದರು.

ಕೊರೊನಾ ವೈರಸ್ ಸೋಂಕು ದೇಶಕ್ಕೆ ಅಪ್ಪಳಿಸಿದ ನಂತರ, ಸರ್ಕಾರ ಮಹಿಳಾ ಸುರಕ್ಷತೆಗಾಗಿ ಹಲವು ಗಂಭೀರ ಕ್ರಮಗಳನ್ನು ಗೊಂಡಿತು. ಅದರಲ್ಲಿ ‘ಒಂದೇ ಸೂರಿನಡಿ ವಿವಿಧ ಸಮಸ್ಯೆಗಳಿಗೆ ಪರಿಹಾರ‘ ನೀಡುವಂತಹ ಕೇಂದ್ರಗಳನ್ನು ತೆರೆದು, ಅದರಲ್ಲಿ ವೈದ್ಯಕೀಯ, ಮಾನಸಿಕ ಆರೋಗ್ಯ, ಕಾನೂನು, ಪೊಲೀಸ್‌ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜತೆಗೆ ಒಂದೇ ಸೂರಿನಡಿ ಮಹಿಳೆಯರಿಗೆ ಆಶ್ರಯ ನೀಡುವಂತಹ ಸೌಲಭ್ಯವನ್ನೂ ನೀಡಲಾಗಿದೆ‘ ಎಂದು ವಿವರಿಸಿದರು.

ADVERTISEMENT

ಕೊರೊನಾ ನಂತರದ ಅವಧಿಯಲ್ಲೂ ಗರ್ಭಿಣಿಯರಿಗೆ, ಹಾಲುಣಿಸುವ ಮಹಿಳೆಯರಿಗೆ, ಸಂಕಷ್ಟದಲ್ಲಿರುವ ಮಹಿಳೆಯರು ಸೇರಿದಂತೆ, ಅಗತ್ಯವಿರುವ ಎಲ್ಲ ಮಹಿಳೆಯರಿಗೂ ಸುರಕ್ಷತೆ ಒದಗಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.