ADVERTISEMENT

‘ಭಗವದ್ಗೀತೆ ಉದ್ಯಾನ’ದಲ್ಲಿ ವಿಧ್ವಂಸಕ ಕೃತ್ಯ: ಭಾರತ ಖಂಡನೆ

ಪಿಟಿಐ
Published 3 ಅಕ್ಟೋಬರ್ 2022, 21:02 IST
Last Updated 3 ಅಕ್ಟೋಬರ್ 2022, 21:02 IST
   

ಟೊರೊಂಟೊ/ನವದೆಹಲಿ: ಕೆನಡಾದ ಬ್ರಾಂಪ್ಟನ್‌ನಲ್ಲಿ ಇತ್ತೀಚೆಗೆ ‘ಶ್ರೀಮದ್‌ ಭಗವದ್ಗೀತಾ ಉದ್ಯಾನ’ವೆಂದು ಮರು ನಾಮಕರಣ ಮಾಡಿದ್ದ ಉದ್ಯಾನದಲ್ಲಿ ನಡೆದಿರುವ ಭಾರತ ವಿರೋಧಿ ವಿಧ್ವಂಸಕ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ,ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರವನ್ನು ಒತ್ತಾಯಿಸಿದೆ.

‘ಬ್ರಾಂಪ್ಟನ್‌ನಲ್ಲಿರುವ ಶ್ರೀ ಭಗವದ್ಗೀತಾ ಪಾರ್ಕ್‌ನಲ್ಲಿ ನಡೆದ ದ್ವೇಷದ ಅಪರಾಧ ಖಂಡನೀಯ. ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಒತ್ತಾಯಿಸಿ, ಟ್ವೀಟ್‌ ಮಾಡಿದೆ.

ಆದರೆ, ಬ್ರಾಂಪ್ಟನ್‌ನಲ್ಲಿನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕೃತ್ಯ ನಡೆದಿರುವುದನ್ನು ನಿರಾಕರಿಸಿದ್ದಾರೆ. ಘಟನೆ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ಟ್ರಾಯರ್ಸ್ ಪಾರ್ಕ್’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಉದ್ಯಾನಕ್ಕೆ ಭಗವದ್ಗೀತೆಯ ಹೆಸರು ಮರುನಾಮಕರಣ ಮಾಡಿ, ಸೆಪ್ಟೆಂಬರ್ 28ರಂದು ಅನಾವರಣಗೊಳಿಸಲಾಗಿತ್ತು.ಕೆನಡಾದಲ್ಲಿ ಮತ್ತೊಂದು ದೇವಾಲಯ ಧ್ವಂಸಗೊಳಿಸಿದ ಕೆಲ ದಿನಗಳ ಬೆನ್ನಲ್ಲೇ ಈ ದಾಳಿ ನಡೆದಿದೆ.

ಉತ್ತರ ಅಮೆರಿಕದಲ್ಲಿ ಇತ್ತೀಚೆಗೆ ‘ನ್ಯಾಯಕ್ಕಾಗಿ ಸಿಖ್‌ರು’ ಎಂಬ ಹೆಸರಿನಲ್ಲಿ ‘ಖಲಿಸ್ತಾನ’ದ ಬೆಂಬಲಿಗರು ಹಿಂದೂ ಮೂರ್ತಿಗಳು, ದೇಗುಲಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ.

ಉದ್ಯಾನದಲ್ಲಿ ವಿಧ್ವಂಸಕ ಕೃತ್ಯ ನಡೆದಿರುವುದನ್ನು ಖಚಿತಪಡಿಸಿರುವ ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್, ‘ಕೆನಡಾ ಇಂತಹ ದಾಳಿಕೋರರನ್ನು ಸಹಿಸಿಕೊಳ್ಳುವುದಿಲ್ಲ. ಉದ್ಯಾನದ ಫಲಕ ಧ್ವಂಸಗೊಳಿಸಿರುವುದು ತಿಳಿದಿದೆ. ಹೆಚ್ಚಿನ ತನಿಖೆಗಾಗಿ ಪೀಲ್‌ನ ಪ್ರಾದೇಶಿಕ ಪೊಲೀಸರಿಗೆ ಸೂಚಿಸಿದ್ದೇವೆ. ಉದ್ಯಾನದ ಅಧಿಕಾರಿಗಳು ಫಲಕಗಳನ್ನು ಸರಿಪಡಿಸುತ್ತಿದ್ದಾರೆ’ ಎಂದು ಭಾನುವಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.