
ಜೆರುಸಲೇಂ: ಭಾರತವು ‘ಜಾಗತಿಕ ಶಕ್ತಿ’ ಎಂದು ಬಣ್ಣಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತ, ಅರಬ್, ಆಫ್ರಿಕ ದೇಶಗಳು, ಗ್ರೀಸ್, ಸೈಪ್ರಸ್ ಒಳಗೊಂಡ ‘ಷಟ್ಕೋನ ಮಾದರಿ’ಯ ಮೈತ್ರಿ ವ್ಯವಸ್ಥೆ ರಚಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ. ನಾವಿಬ್ಬರೂ ಆಗಾಗ್ಗೆ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತೇವೆ. ಮೋದಿ ಅವರು ಇದೇ 25, 26ರಂದು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ’ ಎಂದರು.
ಎರಡೂ ದೇಶಗಳ ನಡುವಿನ ಸಂಬಂಧವನ್ನು ಬಲಗೊಳಿಸಲು ಹಾಗೂ ರಾಜತಾಂತ್ರಿಕ, ಆರ್ಥಿಕ ಮತ್ತು ಭದ್ರತೆ ಕುರಿತು ಹಲವು ನಿರ್ಧಾರಗಳನ್ನು ಕೈಗೊಳ್ಳಲು ಮೋದಿ ಈ ಭೇಟಿ ಕೈಗೊಂಡಿದ್ದಾರೆ ಎಂದು ಹೇಳಿದರು.
ಮೈತ್ರಿ ವ್ಯವಸ್ಥೆ ಹೇಗಿರುತ್ತದೆ ಎನ್ನುವುದರ ಕುರಿತು ನೆತನ್ಯಾಹು ಹೆಚ್ಚೇನು ಮಾಹಿತಿ ಹಂಚಿಕೊಳ್ಳಲಿಲ್ಲ.
ಆದರೆ, ಪಶ್ಚಿಮ ಏಷ್ಯಾ ವಲಯದಲ್ಲಿ ಇಸ್ರೇಲ್ ತನ್ನ ರಾಜಕೀಯ, ಭೌಗೋಳಿಕ ಸ್ಥಾನವನ್ನು ಬಲಪಡಿಸಿಕೊಳ್ಳಲು ಈ ಮೈತ್ರಿ ವ್ಯವಸ್ಥೆ ರಚನೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.