ADVERTISEMENT

8 ಯುದ್ಧ ವಿಮಾನ ಹೊಡೆದು ಉರುಳಿಸಲಾಗಿದೆ: ಟ್ರಂಪ್ ಪುನರುಚ್ಚಾರ

ಭಾರತ ಹಾಗೂ ಪಾಕಿಸ್ತಾನ ಸಂಘರ್ಷ ನಿಲ್ಲಿಸಿದ್ದು ನಾನೇ–ಟ್ರಂಪ್ ಪುನರುಚ್ಚಾರ

ಪಿಟಿಐ
Published 6 ನವೆಂಬರ್ 2025, 15:51 IST
Last Updated 6 ನವೆಂಬರ್ 2025, 15:51 IST
   

ನ್ಯೂಯಾರ್ಕ್‌: ‘ಕಳೆದ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಸಂಘರ್ಷದಲ್ಲಿ 8 ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಲಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ಆದರೆ, ಯಾವ ದೇಶಕ್ಕೆ ಸೇರಿದ ವಿಮಾನ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಫ್ಲಾರಿಡಾದ ಮಿಯಾಮಿಯಲ್ಲಿ ನಡೆದ ಅಮೆರಿಕ ವ್ಯಾಪಾರ ವೇದಿಕೆ ಉದ್ದೇಶಿಸಿ ಮಾತನಾಡಿದ ಅವರು, ಸಂಘರ್ಷದ ವೇಳೆ ಏಳರಿಂದ ಎಂಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಇಲ್ಲಿಯವರೆಗೂ 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಟ್ರಂಪ್ ಹೇಳುತ್ತಿದ್ದರು.

ADVERTISEMENT

‘ಪಾಕಿಸ್ತಾನ–ಭಾರತದ ಸಂಘರ್ಷದ ವೇಳೆ ಎರಡೂ ದೇಶಗಳೊಟ್ಟಿಗೆ ನಾನು ವ್ಯಾಪಾರ ಒಪ್ಪಂದದಲ್ಲಿದ್ದೆ. ಆ ದೇಶಗಳು ಯುದ್ಧಕ್ಕೆ ಮುಂದಾಗಲಿವೆ ಎಂದು ತಿಳಿಯಿತು. ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಎಂಟನೇ ವಿಮಾನಕ್ಕೆ ತೀವ್ರವಾಗಿ ಹಾನಿ ಉಂಟಾಗಿತ್ತು. ಒಟ್ಟಾರೆ ಎಂಟು ಯುದ್ಧ ವಿಮಾನಗಳು ಹೊಡೆದುರುಳಿಸಲಾಗಿದೆ’ ಎಂದು ಹೇಳಿದ್ದಾರೆ.

ಪುನರುಚ್ಚಾರ: ‘ಪಾಕಿಸ್ತಾನ–ಭಾರತದ ನಡುವೆ ಸಂಘರ್ಷ ಕೊನೆಗೊಳಿಸಿದ್ದು ನಾನೇ’ ಎಂದು ಪುನರುಚ್ಚರಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಒಂದೊಮ್ಮೆ ಸೇನಾ ಸಂಘರ್ಷ ಮುಂದುವರಿಸಿದರೆ, ಎಲ್ಲ ವ್ಯಾಪಾರ ಒಪ್ಪಂದಗಳನ್ನು ರದ್ದುಪಡಿಸಲಾಗುವುದು ಎಂದು ಉಭಯ ರಾಷ್ಟ್ರಗಳಿಗೆ ಎಚ್ಚರಿಸಿದ್ದೆ. ಇದಾದ ಬಳಿಕವೇ ಎರಡು ದೇಶಗಳೂ ಶಾಂತಿ ಒಪ್ಪಂದಕ್ಕೆ ಮುಂದಾದವು’ ಎಂದು ಹೇಳಿದ್ದಾರೆ.

ಮಮ್ದಾನಿ ವಿರುದ್ಧ ಟ್ರಂಪ್ ಕಿಡಿ

ನ್ಯೂಯಾರ್ಕ್‌: ನ್ಯೂಯಾರ್ಕ್‌ನ ನೂತನ ಮೇಯರ್‌ ಆಗಿ ಆಯ್ಕೆಯಾದ ಜೊಹ್ರಾನ್‌ ಮಮ್ದಾನಿ ಆಯ್ಕೆ ಕುರಿತು ವ್ಯಂಗ್ಯವಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ಮುಂದೆ ನ್ಯೂಯಾರ್ಕ್‌ ಎಷ್ಟು ಹಾಳಾಗಲಿದೆ ಎನ್ನುವುದನ್ನು ಗಮನಿಸುವಿರಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‌ ‘ಅವರ ಹೆಸರು ಏನೇ ಇರಲಿ ನವೆಂಬರ್‌ 4ರ ಚುನಾವಣೆಯ ನಂತರ ಅಮೆರಿಕನ್ನರು ಕಮ್ಯೂನಿಸಂ ಹಾಗೂ ಸಾಮಾನ್ಯ ಜ್ಞಾನದ ನಡುವೆ ಕಠಿಣ ಆಯ್ಕೆಯನ್ನು ಎದುರಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ‘ಕಳೆದ ವರ್ಷ ನವೆಂಬರ್‌ 5ರಂದು ಎರಡನೇ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದ್ದರು. ಮಂಗಳವಾರ ನಡೆದ ಮೇಯರ್‌ ಚುನಾವಣೆ ಸಂದರ್ಭಲ್ಲಿ ಜನರ ವಿವೇಚನೆ ಸ್ವಲ್ಪ ಕಡಿಮೆಯಾಯಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.