ADVERTISEMENT

ರಾಜಕೀಯ ಅನುಕೂಲತೆ ಆಧರಿಸಿ ಉಗ್ರರ ವರ್ಗೀಕರಣ ತಕ್ಷಣ ನಿಲ್ಲಬೇಕು: ಭಾರತ ಪ್ರತಿಪಾದನೆ

ಪಿಟಿಐ
Published 11 ಡಿಸೆಂಬರ್ 2022, 11:40 IST
Last Updated 11 ಡಿಸೆಂಬರ್ 2022, 11:40 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ಭಯೋತ್ಪಾದಕರನ್ನು ರಾಜಕೀಯ ಅನುಕೂಲತೆಗಳ ಆಧಾರದಲ್ಲಿ ‘ಕೆಟ್ಟವನು‘, ‘ಒಳ್ಳೆಯವನು’ ಎಂದು ವರ್ಗೀಕರಿಸುವ ಪ್ರವೃತ್ತಿ ತಕ್ಷಣದಿಂದ ಅಂತ್ಯಗೊಳ್ಳಬೇಕು ಎಂದು ಭಾರತವು ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚರ್ಚೆಗೆ ಈ ಅಡಕವುಳ್ಳ ಪತ್ರವನ್ನು ಬರೆದಿದ್ದು, ‘ಧಾರ್ಮಿಕ ಅಥವಾ ಸಿದ್ಧಾಂತಗಳ ಆಧಾರದಲ್ಲಿ ಭಯೋತ್ಪಾದಕರನ್ನು ವರ್ಗೀಕರಿಸಿದಲ್ಲಿ ಉಗ್ರರ ವಿರುದ್ಧ ಹೋರಾಡುವ ಜಾಗತಿಕ ಬದ್ಧತೆಯೇ ಮರೆಯಾಗಲಿದೆ’ ಎಂದಿದೆ.

ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತ, ಭಯೋತ್ಪಾದನೆಯನ್ನು ತಡೆಯುವ ಕುರಿತ ಚರ್ಚೆಗಾಗಿ ಎರಡು ಪ್ರಮುಖ ಸಭೆಗಳನ್ನು ಡಿ.14, 15ರಂದು ನಡೆಸಲಿದೆ. ಸಭೆಯ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ವಹಿಸುವರು.

ADVERTISEMENT

‘ಜಾಗತಿಕವಾಗಿ ಭಯೋತ್ಪಾದನೆಗೆ ತಡೆ: ಚಿಂತನೆ ಮತ್ತು ಭವಿಷ್ಯದ ಹಾದಿ’ ವಿಷಯ ಕುರಿತಂತೆ ಡಿ.15ರಂದು ವಿವರ ನೀಡಲಿದೆ. ಈ ಸಭೆಗೆ ಪೂರ್ವಭಾವಿಯಾಗಿ ವಿಶ್ವಸಂಸ್ಥೆ ರಾಯಭಾರ ಕಚೇರಿ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಾಂಬೊಜ್‌ ಅವರು, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರಿಗೆ ಪತ್ರ ಬರೆದಿದ್ದಾರೆ. ಸಭೆಯಲ್ಲಿ ಚರ್ಚೆಗೆ ಪೂರಕ ಮಾಹಿತಿ ಇದಾಗಿದೆ ಎಂದಿದ್ದಾರೆ.

ಸೆ. 11, 2001ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಕೃತ್ಯವು, ಜಾಗತಿಕವಾಗಿ ಈ ಪಿಡುಗು ತಡೆಯಲು ಹೊಸ ಚಿಂತನೆಗೆ ನಾಂದಿ ಹಾಡಿತು. ಆ ನಂತರ ಲಂಡನ್‌, ಮುಂಬೈ, ಪ್ಯಾರಿಸ್‌ ಸೇರಿ ಹಲವೆಡೆ ಉಗ್ರರ ದಾಳಿಗಳು ನಡೆದಿವೆ ಎಂದು ಉಲ್ಲೇಖಿಸಲಾಗಿದೆ.

ಈ ದಾಳಿಗಳು ವಿಶ್ವದಾದ್ಯಂತ ಶಾಂತಿ ಮತ್ತು ಭದ್ರತೆಗೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ, ಸಮಸ್ಯೆಯ ಗಂಭೀರತೆಯನ್ನು ಬಿಂಬಿಸುತ್ತವೆ. ಈಗ ಭಯೋತ್ದಾದಕರ ಸ್ವರೂಪವೂ ಬದಲಾಗಿದೆ. ಕಾರ್ಯವ್ಯಾಪ್ತಿ ವಿಸ್ತರಿಸಿದೆ. ಯಾವುದೇ ಸ್ಥಳದಲ್ಲಿ ಕೃತ್ಯ ಎಸಗುವಂತೆ ಬೆಂಬಲಿಗರು, ಆರ್ಥಿಕ ನೆರವು ನೀಡುವವರು ಇದ್ದಾರೆ. ಇದನ್ನು ಎದುರಿಸಲು ಸಂಘಟಿತವಾದ ಯತ್ನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದೆ.

ಪೂರ್ವಭಾವಿ ಮಾಹಿತಿ ನೀಡುವ ಉನ್ನತ ಮಟ್ಟದ ಸಭೆಯು ಸದಸ್ಯ ರಾಷ್ಟ್ರಗಳು, ಅಕ್ಟೋಬರ್ ತಿಂಗಳಲ್ಲಿ ಮುಂಬೈ, ದೆಹಲಿಯಲ್ಲಿ ನಡೆದಿದ್ದ ಭಯೊತ್ಪಾದನೆ ವಿರೋಧಿ ಸಮಿತಿ ಸಭೆಯ ಅಂಶಗಳ ಕುರಿತು ವಿಸ್ತೃತ ಚರ್ಚೆಗೂ ವೇದಿಕೆಯಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.