ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಚಿತ್ರಕೃಪೆ: X/@kpsharmaoli
ಕಠ್ಮಂಡು: ನೇಪಾಳ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿರುವ 'ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್' (ಬಿಆರ್‌ಐ) ಬಗ್ಗೆ ಭಾರತ ಆಕ್ಷೇಪವೆತ್ತಬಾರದು. ಈ ಸಂಪರ್ಕ ಯೋಜನೆಯಿಂದ ಭಾರತವೂ ಪ್ರಯೋಜನ ಪಡೆಯಬಹುದು ಎಂದು ನೇಪಾಳ ಸಚಿವ ರಘುವೀರ್ ಮಹಾಸೇತ್ ಶುಕ್ರವಾರ ಹೇಳಿದ್ದಾರೆ.
ಸಾವಿರಾರು ಕೋಟಿ ಮೊತ್ತದ ಬಿಆರ್‌ಐ ಒಪ್ಪಂದಕ್ಕೆ ನೇಪಾಳ ಮತ್ತು ಚೀನಾ ಬುಧವಾರ ಸಹಿ ಮಾಡಿವೆ. ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರು ಚೀನಾಗೆ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಈ ಒಪ್ಪಂದವಾಗಿದೆ. ಇದು ಚಿನಾವನ್ನು, ಆಗ್ನೇಯ ಏಷ್ಯಾ, ರಷ್ಯಾ ಮತ್ತು ಯುರೋಪ್ ರಾಷ್ಟ್ರಗಳೊಂದಿಗೆ ಸಂಪರ್ಕಿಸುವ ಭಾರಿ ಯೋಜನೆಯಾಗಿದೆ. ಒಪ್ಪಂದವು ಉಭಯ ರಾಷ್ಟ್ರಗಳ ನಡುವಣ ಆರ್ಥಿಕ ಸಹಕಾರಕ್ಕೆ ದಾರಿ ಮಾಡಿಕೊಟ್ಟಿದೆ.
'ಚೀನಾಕ್ಕೆ ಕೆ.ಪಿ. ಶರ್ಮಾ ಓಲಿ ಭೇಟಿಯ ಬಳಿಕ ಬಿಆರ್‌ಐ ಅನುಷ್ಠಾನ' ಎಂಬ ವಿಚಾರವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಹಾಸೇತ್ ಮಾತನಾಡಿದ್ದಾರೆ.
ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ವಿದೇಶಾಂಗ ಇಲಾಖೆಯ ಮಾಜಿ ಸಚಿವರೂ ಆಗಿರುವ ಅವರು, 'ನೇಪಾಳವು ಬಿಆರ್‌ಐ ಯೋಜನೆಗೆ ಸಹಕಾರ ನೀಡಲು ಒಪ್ಪಂದ ಮಾಡಿಕೊಂಡಿರುವುದಕ್ಕೆ ಭಾರತ ಆಕ್ಷೇಪ ಎತ್ತಬಾರದು. ಏಕೆಂದರೆ, ಆ ರಾಷ್ಟ್ರಕ್ಕೂ ಯೋಜನೆಯಿಂದ ಪ್ರಯೋಜನವಾಗಲಿದೆ' ಎಂದು ಹೇಳಿದ್ದಾರೆ.
'ನೇಪಾಳ ಮತ್ತು ಚೀನಾ ನಡುವೆ ರೈಲು ಮತ್ತು ರಸ್ತೆ ಮಾರ್ಗಗಳಂತಹ ಮೂಲಸೌಕರ್ಯ ಅಭಿವೃದ್ಧಿಯಾದರೆ, ಅದನ್ನು ಭಾರತವೂ ಬಳಸಿಕೊಳ್ಳಬಹುದು. ಹಾಗಾಗಿ, ಈ ಒಪ್ಪಂದದ ಬಗ್ಗೆ ಭಾರತ ಕಳವಳಪಡುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
ಕೆರುಂಗ್–ಕಠ್ಮಂಡು ಮಾರ್ಗ ಮತ್ತು ಕಠ್ಮಂಡು ರಕ್ಸಾಲ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಿದರೆ, ಭಾರತವು ಹೆಚ್ಚು ಪ್ರಯೋಜನ ಪಡೆಯಲಿದೆ ಎಂದಿರುವ ಅವರು, ಚೀನಾದ ಸರಕುಗಳನ್ನು ಒಂದೇ ದಿನದಲ್ಲಿ ಭಾರತಕ್ಕೆ ತರಲು ಸಾಧ್ಯವಾಗಲಿದೆ. ಇಲ್ಲವಾದರೆ, ವಾರಗಳೇ ಬೇಕಾಗಬಹುದು ಎಂದು ಒತ್ತಿಹೇಳಿದ್ದಾರೆ.
ಕೆರುಂಗ್ ದಕ್ಷಿಣ ಟಿಬಟ್‌ನಲ್ಲಿರುವ ಪಟ್ಟಣವಾಗಿದೆ. ರಕ್ಷೌಲ್ ಭಾರತದ ಬಿಹಾರದಲ್ಲಿದೆ. ಇವೆರಡೂ ಗಡಿ ಭಾಗದಲ್ಲಿರುವ ಪ್ರಮುಖ ಪಟ್ಟಣಗಳಾಗಿವೆ.
ದೇಶದ ಹಿಸಾಸಕ್ತಿ ದೃಷ್ಟಿಯಿಂದ ಚೀನಾದಿಂದ ನೇಪಾಳ ಸಾಲ ಪಡೆದರೆ ಯಾವುದೇ ತಕರಾರುಗಳು ಇಲ್ಲ ಎಂದೂ ಮಹಾಸೇತ್ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮಟ್ಟದಲ್ಲಿ ಚೀನಾದ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆ ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹಾತ್ವಾಕಾಂಕ್ಷಿಯ ಯೋಜನೆಯಾಗಿರುವ ಬಿಆರ್‌ಐ ವಿರುದ್ಧ ಧ್ವನಿ ಎತ್ತಿದ ಮೊದಲ ರಾಷ್ಟ್ರ ಭಾರತ.
'ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಮುಂದಾಗಿದೆ. ಈ ಯೋಜನೆಯನ್ನು ವಿರೋಧಿಸುವ ಭಾರತದ ನಿಲುವಿನದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಈ ಹಿಂದೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇತ್ತೀಚೆಗೆ ಹೇಳಿದ್ದಾರೆ. ಬ್ರೆಜಿಲ್ ಸಹ ಬಿಆರ್‌ಐ ಅನ್ನು ವಿರೋಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.