ADVERTISEMENT

ಚೆಸ್ ಒಲಿಂಪಿಯಾಡ್‌ನಿಂದ ಏಕಾಏಕಿ ಹಿಂದೆ ಸರಿದ ಪಾಕಿಸ್ತಾನ: ಇದು ರಾಜಕೀಯ ಎಂದ ಭಾರತ

ಪಿಟಿಐ
Published 28 ಜುಲೈ 2022, 13:53 IST
Last Updated 28 ಜುಲೈ 2022, 13:53 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ತಮಿಳುನಾಡಿನಲ್ಲಿ ನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ ಟೂರ್ನಿಯಿಂದ ಏಕಾಏಕಿ ಹಿಂದೆ ಸರಿದಿರುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ಖಂಡಿಸಿದೆ. ಪಾಕಿಸ್ತಾನದ ಈ ನಡೆಯು ‌ಅತ್ಯಂತ ದುರದೃಷ್ಟಕರ ಎಂದಿರುವ ಭಾರತ, ಪ್ರತಿಷ್ಠಿತ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಜಕೀಯ ಬೆರೆಸಲಾಗುತ್ತಿದೆ ಎಂದು ಟೀಕಿಸಿದೆ.

ಪಾಕ್‌ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ, ಪಾಕಿಸ್ತಾನ ಇದ್ದಕ್ಕಿದ್ದಂತೆ ಕೂಟದಲ್ಲಿ ಭಾಗವಹಿಸದಿರುವ ನಿರ್ಧಾರ ಕೈಗೊಂಡಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದಿದ್ದಾರೆ.

ಮುಂದುವರಿದು,ಪಾಕಿಸ್ತಾನವು ಇಂತಹ ಹೇಳಿಕೆ ನೀಡುವ ಮೂಲಕ ಹಾಗೂ ಆ ದೇಶದ ತಂಡ ಈಗಾಗಲೇ ಭಾರತಕ್ಕೆ ತಲುಪಿದ ನಂತರ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದರೊಂದಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ರಾಜಕೀಯ ಬೆರೆಸುತ್ತಿದೆ. ಇದು ಅತ್ಯಂತ ದುರದೃಷ್ಟಕರ ಎಂದೂ ಕಿಡಿಕಾರಿದ್ದಾರೆ.

ADVERTISEMENT

ಚೆಸ್‌ ಒಲಿಂಪಿಯಾಡ್‌ ಕ್ರೀಡಾ ಜ್ಯೋತಿ ಯಾತ್ರೆ ಜಮ್ಮು ಮತ್ತು ಕಾಶ್ಮೀರದ ಮೂಲಕ ಹಾದುಹೋಗುವ ವಿಚಾರವಾಗಿ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ ಎಂಬ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಾಗ್ಚಿ, ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಭಾರತದ ಅವಿಭಾಜ್ಯ ಅಂಗಗಳು. ಅವು ಹಾಗೆಯೇ ಉಳಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

44ನೇ ಚೆಸ್‌ ಒಲಿಂಪಿಯಾಡ್‌ ಟೂರ್ನಿಯುತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28ರಿಂದ ಆಗಸ್ಟ್‌ 10ರ ವರೆಗೆ ನಡೆಯಲಿದೆ. ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆ (ಫಿಡೆ) ಇದೇ ಮೊದಲ ಬಾರಿಗೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಒಲಿಂಪಿಕ್‌ ಮಾದರಿಯಲ್ಲಿ ಜ್ಯೋತಿಯಾತ್ರೆ ಪರಿಚಯಿಸಿದೆ.

100 ವರ್ಷಗಳ ಇತಿಹಾಸ ಹೊಂದಿರುವ ಚೆಸ್‌ ಒಲಿಂಪಿಯಾಡ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. 188 ದೇಶಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.