ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ. ಒಳಚಿತ್ರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕೃಪೆ: ರಾಯಿಟರ್ಸ್
ಮಾಸ್ಕೊ: ಭಾರತದ ತೈಲ ಕಂಪನಿಗಳು ಉತ್ತಮ ಒಪ್ಪಂದ ಸಾಧ್ಯವಾಗುವ ಯಾವುದೇ ಸ್ಥಳದಿಂದ ಇಂಧನ ಖರೀದಿ ಮುಂದುವರಿಸಲಿವೆ ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ಹೇಳಿದ್ದಾರೆ. ಆ ಮೂಲಕ, 'ದೇಶದ ಹಿತಾಸಕ್ತಿ' ರಕ್ಷಿಸುವ ಕ್ರಮಗಳನ್ನು ಭಾರತ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ 'TASS'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆಯ ಖಾತ್ರಿಪಡಿಸಿಕೊಳ್ಳುವುದಕ್ಕೆ ಭಾರತ ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.
ಈ ಸಂದರ್ಶನದ ವರದಿ ಭಾನುವಾರ ಪ್ರಕಟವಾಗಿದೆ.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ಅಮೆರಿಕ ಟೀಕೆ ಮಾಡುತ್ತಿರುವುದರ ನಡುವೆಯೇ ವಿನಯ್ ಅವರು ಈ ಹೇಳಿಕೆ ನೀಡಿದ್ದಾರೆ. ಅಮೆರಿಕದ ಹೇಳಿಕೆಗಳನ್ನು ಭಾರತ ಈಗಾಗಲೇ ತಳ್ಳಿಹಾಕಿದೆ.
ವ್ಯವಹಾರವು 'ವಾಣಿಜ್ಯ ಅಂಶಗಳ ಆಧಾರದ ಮೇಲೆ' ನಡೆಯುತ್ತದೆ ಎಂದು ಒತ್ತಿ ಹೇಳಿರುವ ಕುಮಾರ್, 'ಉತ್ತಮ ಒಪ್ಪಂದ ಎಲ್ಲೆಲ್ಲಾ ಸಾಧ್ಯವಾಗುತ್ತವೋ ಅಲ್ಲೆಲ್ಲಾ ತೈಲ ಖರೀದಿಸುವುದನ್ನು ಭಾರತದ ಕಂಪನಿಗಳು ಮಂದುವರಿಸಲಿವೆ. ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ನಮ್ಮ ಉದ್ದೇಶ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ಇತರ ರಾಷ್ಟ್ರಗಳ ಹಾಗೆಯೇ ರಷ್ಯಾದೊಂದಿಗೆ ಭಾರತ ಹೊಂದಿರುವ ಉತ್ತಮ ಸಹಕಾರ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಲು ನೆರವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿದಿಲ್ಲ. ಹೀಗಾಗಿ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ಹೇರುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೊರಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.