ADVERTISEMENT

ಸಿ.ಆರ್. ರಾವ್‌ಗೆ ಸಂಖ್ಯಾಶಾಸ್ತ್ರದ ಅಂತರರಾಷ್ಟ್ರೀಯ ಪ್ರಶಸ್ತಿ

ಪಿಟಿಐ
Published 10 ಏಪ್ರಿಲ್ 2023, 13:59 IST
Last Updated 10 ಏಪ್ರಿಲ್ 2023, 13:59 IST
ಸಿ.ಆರ್. ರಾವ್ 
ಸಿ.ಆರ್. ರಾವ್    

ವಾಷಿಂಗ್ಟನ್: ಪ್ರಖ್ಯಾತ ಭಾರತೀಯ- ಅಮೆರಿಕನ್ ಗಣಿತಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ ಕ್ಯಾಲ್ಯಂಪುಡಿ ರಾಧಾಕೃಷ್ಣ ರಾವ್ (ಸಿ.ಆರ್. ರಾವ್) ಅವರು 75 ವರ್ಷಗಳ ಹಿಂದೆ ಸಂಖ್ಯಾಶಾಸ್ತ್ರೀಯ ಚಿಂತನೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಕಾರ್ಯಕ್ಕಾಗಿ 2023ರ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಈ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಸಮಾನವಾದದ್ದಾಗಿದೆ.

‘75 ವರ್ಷಗಳ ಹಿಂದೆ ರಾವ್ ಅವರು ಮಾಡಿದ ಕೆಲಸವು ವಿಜ್ಞಾನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತಿದೆ’ ಎಂದು ಇಂಟರ್‌ನ್ಯಾಷನಲ್ ಪ್ರೈಜ್ ಇನ್ ಸ್ಟಾಟಿಸ್ಟಿಕ್ಸ್ ಫೌಂಡೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜುಲೈ ತಿಂಗಳಲ್ಲಿ ಕೆನಡಾದ ಒಟ್ಟಾವದಲ್ಲಿ ನಡೆಯಲಿರುವ ಇಂಟರ್‌ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ವರ್ಲ್ಡ್ ಸ್ಟ್ಯಾಟಿಸ್ಟಿಕ್ಸ್‌ ಕಾಂಗ್ರೆಸ್‌ನಲ್ಲಿ 102 ವರ್ಷ ವಯಸ್ಸಿನ ಸಿ.ಅರ್. ರಾವ್ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಪ್ರಶಸ್ತಿಯು ₹ 65 ಲಕ್ಷ ನಗದನ್ನು ಒಳಗೊಂಡಿದೆ.

ADVERTISEMENT

ಕರ್ನಾಟಕದ ನಂಟು: ಕರ್ನಾಟಕದ ಹೂವಿನಹಡಗಲಿಯ ತೆಲುಗು ಕುಟುಂಬದಲ್ಲಿ ಜನಿಸಿದ ರಾವ್ ಅವರ ಶಾಲಾಶಿಕ್ಷಣವು ಆಂಧ್ರ ಪ್ರದೇಶದಲ್ಲಿ ಆಯಿತು. ಎಂ.ಎಸ್ಸಿ ಗಣಿತಶಾಸ್ತ್ರದಲ್ಲಿ ಆಂಧ್ರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅವರು, 1943ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಳಿಕ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್‌.ಡಿ ಮುಗಿಸಿದ ಅವರು 1965ರಲ್ಲಿ ಡಿಎಸ್ಸಿ ಪದವಿಯನ್ನೂ ಪಡೆದರು.

ಆರಂಭದಲ್ಲಿ ಕೇಂಬ್ರಿಜ್ ನ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಆಂಥ್ರೊಪಾಲಾಜಿಕಲ್ ಮ್ಯೂಸಿಯಂನಲ್ಲಿ ಕೆಲಸ ಮಾಡಿದರು. ಬಳಿಕ ಭಾರತೀಯ ಅಂಕಿ– ಅಂಶ ಸಂಸ್ಥೆಯ ನಿರ್ದೇಶಕರಾಗಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.

ಸಿ.ಆರ್. ರಾವ್ ಅವರು ಪ್ರಸ್ತುತ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಮತ್ತು ಬಫಲೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.