ADVERTISEMENT

ಜೋ ಬೈಡನ್ ಗೆಲುವಿಗೆ ಭಾರತೀಯ ಅಮೆರಿಕನ್ನರ ಸಂಭ್ರಮ

ಪಿಟಿಐ
Published 8 ನವೆಂಬರ್ 2020, 2:22 IST
Last Updated 8 ನವೆಂಬರ್ 2020, 2:22 IST
ಜೋ ಬೈಡನ್ ಗೆಲುವಿಗೆ ಸಂಭ್ರಮಾಚರಣೆ (ಎಎಫ್‌ಪಿ ಚಿತ್ರ)
ಜೋ ಬೈಡನ್ ಗೆಲುವಿಗೆ ಸಂಭ್ರಮಾಚರಣೆ (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್: ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗುತ್ತಿರುವುದರಿಂದ ರೋಮಾಂಚನಗೊಂಡಿದ್ದೇವೆ ಎಂದು ಭಾರತೀಯ ಅಮೆರಿಕನ್ನರು ಹೇಳಿದ್ದಾರೆ.

‘ಇದು ಭಾರತೀಯ ಅಮೆರಿಕನ್ನರ ಪಾಲಿಗೆ ಮಹತ್ವದ ದಿನ’ ಎಂದು ‘ಇಂಡಿಯಾಸ್ಪೊರಾ’ ಸ್ಥಾಪಕ ಎಂ.ರಂಗಸ್ವಾಮಿ ಹೇಳಿದ್ದಾರೆ.

‘ಭಾರತದ ಜತೆಗಿನ ಬಾಂಧವ್ಯ ವೃದ್ಧಿಯನ್ನು ಜೋ ಬೈಡನ್ ದೀರ್ಘ ಅವಧಿಯಿಂದ ಬೆಂಬಲಿಸುತ್ತಾ ಬಂದಿದ್ದಾರೆ. ಭಾರತ–ಅಮೆರಿಕ ಪರಮಾಣು ಒಪ್ಪಂದಕ್ಕೆ ಅನುಮೋದನೆ ಪಡೆಯಲು ಸೆನೆಟರ್ ಆಗಿ ಅವರು ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷರಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೆ, ಭಾರತವನ್ನು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ಎಂದು ಘೋಷಿಸುವಂತೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿಯೂ ಭಾರತವನ್ನು ಬೆಂಬಲಿಸಿದ್ದಾರೆ ಎಂದು ರಂಗಸ್ವಾಮಿ ಹೇಳಿದ್ದಾರೆ.

ADVERTISEMENT

‘ವಿಶ್ವದ ಹಳೆಯ ಪ್ರಜಾಪ್ರಭುತ್ವದ ಯುವ ವಲಸೆ ಸಮುದಾಯವಾದ ಭಾರತೀಯ ಅಮೆರಿಕನ್ನರು ಇಷ್ಟು ಬೇಗ ತಮ್ಮವರೇ ಆದ ಉಪಾಧ್ಯಕ್ಷರನ್ನು ಹೊಂದಬಹುದು ಎಂದು ಯಾರು ಭಾವಿಸಿದ್ದರು? ಇದು ನಮ್ಮ ಕಲ್ಪನೆಗೆ ಮೀರಿದ್ದು. ಆದರೆ ಇದು ಅಮೆರಿಕದ ಕನಸಾಗಿತ್ತು. ಇದಕ್ಕಾಗಿಯೇ ಅಮೆರಿಕಕ್ಕೆ ವಲಸಿಗರು ಬರುತ್ತಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘ಅಮೆರಿಕದ ದೇಶಭಕ್ತರು ತಮ್ಮ ದೇಶವನ್ನು ವಾಪಸ್ ಪಡೆದಿದ್ದಾರೆ’ ಎಂದು ನ್ಯೂಯಾರ್ಕ್‌ನ ಮಾಜಿ ಅಟಾರ್ನಿ ಜನರಲ್ ಪ್ರೀತ್ ಭರಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.