ADVERTISEMENT

ಉಕ್ರೇನ್‌ನಲ್ಲಿ ರಷ್ಯಾ ಅಟ್ಟಹಾಸ: ಭಾರತದ ರಾಯಭಾರ ಕಚೇರಿ ಪೋಲೆಂಡ್‌ಗೆ ಸ್ಥಳಾಂತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 10:56 IST
Last Updated 13 ಮಾರ್ಚ್ 2022, 10:56 IST
ಉಕ್ರೇನ್‌ನಲ್ಲಿ ಭಾರತದ ರಾಯಭಾರ ಕಚೇರಿ
ಉಕ್ರೇನ್‌ನಲ್ಲಿ ಭಾರತದ ರಾಯಭಾರ ಕಚೇರಿ   

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ತೀವ್ರತೆ ಹೆಚ್ಚಿರುವ ಬೆನ್ನಲ್ಲೇ ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲಿದೆ. ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷ 18ನೇ ದಿನವೂ ಮುಂದುವರಿದಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಈ ಕುರಿತು ಪ್ರಕಟಿಸಿದೆ.

'ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲೂ ದಾಳಿ ನಡೆಯುತ್ತಿದ್ದು, ಭದ್ರತಾ ಪರಿಸ್ಥಿತಿಯು ಕುಸಿಯುತ್ತಿದೆ. ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮುಂದಿನ ಬೆಳವಣಿಗೆಗಳನ್ನು ಆಧರಿಸಿ ಪರಿಸ್ಥಿತಿಯ ಬಗ್ಗೆ ಮರು ಅವಲೋಕನ ನಡೆಸಲಾಗುತ್ತದೆ' ಎಂದು ಸರ್ಕಾರ ತಿಳಿಸಿದೆ.

ADVERTISEMENT

ಇಂದು ರಷ್ಯಾದ ಯುದ್ಧ ಪಾತಕಿಗಳು ಮತ್ತೆ ಉಕ್ರೇನ್‌ನ ಮೇಯರ್‌ವೊಬ್ಬರನ್ನು ಅಪಹರಿಸಿರುವುದಾಗಿ ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾನುವಾರ ಉಕ್ರೇನ್‌ನ ಸೇನಾ ನೆಲೆಯ ಮೇಲೆ ರಷ್ಯಾದ ವಾಯು ಪಡೆ ಆಕ್ರಮಣ ನಡೆಸಿದ್ದು, ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 57 ಮಂದಿ ಗಾಯಗೊಂಡಿದ್ದಾರೆ. ಪೋಲೆಂಡ್‌ನ ಗಡಿಗೆ ಸಮೀಪದಲ್ಲಿ ಭಾನುವಾರ ವೈಮಾನಿಕ ದಾಳಿ ನಡೆದಿರುವುದಾಗಿ ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದಿರುವ ಸ್ಥಳವು ಪೋಲೆಂಡ್‌ ಗಡಿ ಭಾಗಕ್ಕೆ 25 ಕಿ.ಮೀ. ದೂರದಲ್ಲಿದೆ. ನ್ಯಾಟೊ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ಚಟುವಟಿಕೆಗಳನ್ನು ಇಲ್ಲಿನ ಸೇನಾ ತರಬೇತಿ ಕೇಂದ್ರದಲ್ಲಿ ನಡೆಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.