ADVERTISEMENT

ಮಂಗಳಕ್ಕೆ ಮಾನವ: ನಾಸಾದ ಯೋಜನೆ ಮುಖ್ಯಸ್ಥರಾಗಿ ಭಾರತೀಯ ಮೂಲದ ಟೆಕಿ ನೇಮಕ

ಪಿಟಿಐ
Published 31 ಮಾರ್ಚ್ 2023, 11:25 IST
Last Updated 31 ಮಾರ್ಚ್ 2023, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ನಾಸಾ ಹೊಸದಾಗಿ ಆರಂಭಿಸಿರುವ ‘ಚಂದ್ರನಿಂದ– ಮಂಗಳ’ಕ್ಕೆ ಮಾನವ ಸಹಿತ ಮೊದಲ ಗಗನಯಾನ ಯೋಜನೆಯ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಮೆರಿಕದ ಸಾಫ್ಟ್‌ವೇರ್‌ ಮತ್ತು ರೊಬೊಟಿಕ್‌ ಎಂಜಿನಿಯರ್‌ ಅಮಿತ್‌ ಕ್ಷತ್ರಿಯಾ ಅವರನ್ನು ನೇಮಿಸಲಾಗಿದೆ.

ನಾಸಾದ ಈ ಯೋಜನೆಯ ಮುಖ್ಯಸ್ಥರಾಗಿ ತಕ್ಷಣದಿಂದಲೇ ಕ್ಷತ್ರಿಯಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮನುಕುಲದ ಒಳಿತಿಗೆ ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಸಂಸ್ಥೆಯ ಮಾನವ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿಯನ್ನು ಈ ಹೊಸ ಯೋಜನೆ ಹೊಂದಿದೆ ಎಂದು ನಾಸಾ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ, ನಾಸಾದ ಸಾಮಾನ್ಯ ಪರಿಶೋಧನೆ ವ್ಯವಸ್ಥೆಗಳ ಅಭಿವೃದ್ಧಿ ವಿಭಾಗದ ಪ್ರಭಾರ ಉಪ ಸಹಾಯಕ ನಿರ್ವಾಹಕರಾಗಿ ಕೆಲಸ ಮಾಡಿದ್ದ ಅಮಿತ್‌ ಅವರು, ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಮಾನವ ಸಹಿತ ಗಗನಯಾನ ಕಾರ್ಯಾಚರಣೆಗಳ ಯೋಜನೆ ಮತ್ತು ಅನುಷ್ಠಾನದ ಹೊಣೆ ನಿಭಾಯಿಸಲಿದ್ದಾರೆ.

ADVERTISEMENT

‘ಪರಿಶೋಧನೆಯ ಸುವರ್ಣಯುಗ ಇದೀಗ ಆರಂಭವಾಗುತ್ತಿದೆ. ಕೆಂಪು ಗ್ರಹದ ಮೇಲೆ ಮಾನವನ ಹೆಜ್ಜೆ ಗುರುತು ಮೂಡಿಸುವ ಮುಂದಿನ ಪೂರ್ವ ಸಿದ್ಧತೆಯಾಗಿ ಚಂದ್ರನಲ್ಲಿ ದೀರ್ಘಕಾಲ ಮನುಷ್ಯನನ್ನು ನೆಲೆಯೂರಿಸಿ ಖಾತ್ರಿಪಡಿಸಿಕೊಳ್ಳಲಾಗುವುದು. ಈ ಯೋಜನೆ ನಾಸಾದ ಮೊದಲ ಮಾನವ ಸಹಿತ ಮಂಗಳಯಾನಕ್ಕೆ ನೆರವಾಗಲಿದೆ’ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.