ADVERTISEMENT

ಬ್ರಿಟನ್‌ ವಿಸಾ: ಭಾರತದ ನುರಿತ ನೌಕರರು, ವೈದ್ಯರು, ವಿದ್ಯಾರ್ಥಿಗಳೇ ಹೆಚ್ಚು

ಪಿಟಿಐ
Published 23 ನವೆಂಬರ್ 2023, 12:01 IST
Last Updated 23 ನವೆಂಬರ್ 2023, 12:01 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಂಡನ್: ಬ್ರಿಟನ್‌ ವಿಸಾ ಪಡೆಯುವಲ್ಲಿ ಭಾರತದ ನುರಿತ ಕೆಲಸಗಾರರು, ವೈದ್ಯಕೀಯ ವೃತ್ತಿಯವರು ಹಾಗೂ ವಿದ್ಯಾರ್ಥಿಗಳೇ ಕಳೆದ ಒಂದು ವರ್ಷದಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂದು ಗುರುವಾರ ಬಿಡುಗಡೆಯಾದ ವಲಸೆ ಕುರಿತ ರಾಷ್ಟ್ರೀಯ ಸಾಂಖಿಕ ಇಲಾಖೆಯ ಅಂಕಿಅಂಶ ಹೇಳಿದೆ.

ಬ್ರಿಟನ್‌ನ ಗೃಹ ಇಲಾಖೆ ಅಧೀನದಲ್ಲಿರುವ ಈ ಇಲಾಖೆಯು ಬಿಡುಗಡೆ ಮಾಡಿರುವ ದಾಖಲೆ ಅನ್ವಯ, ಪ್ರತಿಭಾವಂತ ಕಾರ್ಮಿಕರಿಗೆ ನೀಡುವ ವಿಸಾ ಮಾರ್ಗದ ಜತೆಗೆ ಆರೋಗ್ಯ ಹಾಗೂ ಆರೈಕೆ ಕ್ಷೇತ್ರದಲ್ಲಿ ದುಡಿಯುವವರಿಗೆ ನೀಡುವ ವಿಸಾ ಮಾರ್ಗದ ಮೂಲಕವೂ ಐರೋಪ್ಯ ರಾಷ್ಟ್ರ ಪ್ರವೇಶಿಸುತ್ತಿದ್ದಾರೆ. ಜಗತ್ತಿನ ಬೇರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತೀಯರ ಬ್ರಿಟನ್ ಪ್ರವೇಶ ಪ್ರಮಾಣ ಶೇ 43ರಷ್ಟಿದೆ’ ಎಂದಿದೆ.

ADVERTISEMENT

ಕುಶಲ ಕಾರ್ಮಿಕರಿಗೆ ನೀಡುವ ವಿಸಾ ಕಳೆದ ಒಂದು ವರ್ಷದಲ್ಲಿ ಕೇವಲ ಶೇ 9ರಷ್ಟು ಏರಿಕೆ ಕಂಡಿದೆ. ಆದರೆ ಆರೋಗ್ಯ ಮತ್ತು ಆರೈಕೆ ಕ್ಷೇತ್ರಕ್ಕೆ ಪಡೆಯುವ ವಿಸಾ ದ್ವಿಗುಣ (ಶೇ 135) ಗೊಂಡಿದೆ. ಒಟ್ಟು 1.43 ಲಕ್ಷ ಜನ ವಿಸಾ ಪಡೆದಿದ್ದಾರೆ. ಇವರಲ್ಲಿ ಭಾರತೀಯರ ಸಂಖ್ಯೆ 38 ಸಾವಿರ. 2ನೇ ಸ್ಥಾನದಲ್ಲಿ 26 ಸಾವಿರ ನೈಜೀರಿಯಾದವರಿದ್ದಾರೆ. 3ನೇ ಸ್ಥಾನದಲ್ಲಿ 21 ಸಾವಿರ ಜಿಂಬಾಬ್ವೆ ಪ್ರಜೆಗಳಿದ್ದಾರೆ. 

ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಭಾರತೀಯರ ಪ್ರವೇಶ ಶೇ 76ರಷ್ಟು ಹೆಚ್ಚಾಗಿದೆ. ಆದರೆ ಕುಶಲ ಕಾರ್ಮಿಕರ ವಿಸಾದಲ್ಲಿ ಭಾರತೀಯರ ಸಂಖ್ಯೆ ಶೇ 11ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ 20 ಸಾವಿರ ಜನರು ವಿಸಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷ 18 ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ.

ವಿದ್ಯಾರ್ಜನೆಗಾಗಿ ಪ್ರಾಯೋಜಿತ ವಿಸಾವನ್ನು ಪಡೆದ ಭಾರತೀಯರ ಸಂಖ್ಯೆ 1.33 ಲಕ್ಷ. ಕಳೆದ ವರ್ಷಕ್ಕಿಂತ ಈ ವರ್ಷ  ಈ ಸಂಖ್ಯೆಯಲ್ಲಿ ಶೇ 5ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಪ್ರವಾಸಕ್ಕಾಗಿ ಬ್ರಿಟ‌ನ್ ವಿಸಾ ಪಡೆಯುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಭಾರತೀಯರ ನಂತರದ ಸ್ಥಾನದಲ್ಲಿ ಚೀನಾ ಹಾಗೂ ಟರ್ಕಿ ಪ್ರಜೆಗಳು ಸೇರಿದ್ದಾರೆ. ಅವಲಂಬಿತ ವಿಸಾ ಪಡೆಯುವ ನೈಜಿರಿಯಾಗಿಂತ ಒಂದು ಸ್ಥಾನ ಹಿಂದಿರುವ ಭಾರತೀಯರು 2ನೇ ಸ್ಥಾನದಲ್ಲಿದ್ದಾರೆ.

ಬ್ರಿಟನ್‌ನಲ್ಲಿ ಸದ್ಯ ಆಡಳಿತದಲ್ಲಿರುವ ಕನ್ಸರ್ವೇಟಿವ್ ಪಕ್ಷವು ವಲಸೆ ಬರುವವರ ಸಂಖ್ಯೆ ತಗ್ಗಿಸುವ ವಾಗ್ದಾನ ಮಾಡಿದೆ. ಜತೆಗೆ ಸ್ಥಳೀಯರಿಗೆ ಹೆಚ್ಚಿನ ಉದ್ಯೊಗ ಸೃಷ್ಟಿಸುವ ಭರವಸೆಯನ್ನೂ ನೀಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ವರ್ಷ ಯುಕೆ ವಿಸಾ ಪಡೆದವರ ಸಂಖ್ಯೆ 7.45 ಲಕ್ಷ ಇದ್ದರೆ, ಈವರ್ಷ ಇದು 6.72ಕ್ಕೆ ಕುಸಿದಿದೆ.

ಬ್ರಿಟನ್‌ ವಿಸಾ ಪಡೆದವರಲ್ಲಿ ಭಾರತೀಯರು 2.53ಲಕ್ಷ ಜನರಿದ್ದರೆ, ನೈಜಿರಿಯಾದಿಂದ 1.41 ಲಕ್ಷ, ಚೀನಾದಿಂದ 89 ಸಾವಿರ, ಪಾಕಿಸ್ತಾನದ 55 ಸಾವಿರ ಹಾಗೂ ಉಕ್ರೇನ್‌ನ 35 ಸಾವಿರ ವಲಸಿಗರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.