ರಂಜನಿ ಶ್ರೀನಿವಾಸನ್
(ಚಿತ್ರ ಕೃಪೆ: X/@PTI_News)
ನ್ಯೂಯಾರ್ಕ್/ವಾಷ್ಟಿಂಗ್ಟನ್: ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಅವರು ಸ್ವಯಂ ಪ್ರೇರಣೆಯಿಂದ ಅಮೆರಿಕ ತೊರೆದಿದ್ದಾರೆ. ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೀನಿಯನ್ನರ ಪರವಾಗಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಅಮೆರಿಕವು ಆಕೆಯ ವಿದ್ಯಾರ್ಥಿ ವೀಸಾವನ್ನು ರದ್ದು ಮಾಡಿತ್ತು.
‘ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರಚೋದಿಸಿ, ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು’ ಎಂಬ ಆರೋಪವನ್ನು ರಂಜನಿ ಮೇಲೆ ಹೊರಿಸಲಾಗಿದೆ. ಈ ಬಗ್ಗೆ ಅಮೆರಿಕದ ಗೃಹ ಭದ್ರತಾ ಇಲಾಖೆಯು ಹೇಳಿಕೆ ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದಿಂದ ರಂಜನಿ ಅವರು ತೆರಳಿದ ವಿಡಿಯೊವನ್ನೂ ಅದು ಹಂಚಿಕೊಂಡಿದೆ.
‘ಮಾರ್ಚ್ 5ರಂದು ರಂಜನಿ ಅವರ ಎಫ್–1 ವೀಸಾವನ್ನು ರದ್ದು ಮಾಡಲಾಗಿದ್ದು, ಅವರು ಅಮೆರಿಕ ಕಸ್ಟಮ್ಸ್ ಮತ್ತು ಗಡಿ ಭದ್ರತೆ (ಸಿಬಿಪಿ) ಆ್ಯಪ್ ಮೂಲಕ ಮಾರ್ಚ್ 11ರಂದು ಸ್ವಯಂ ಪ್ರೇರಿತವಾಗಿ ದೇಶ ತೊರೆಯುವ ಆಯ್ಕೆಯನ್ನು ಮಾಡಿಕೊಂಡಿದ್ದರು’ ಎಂದು ಇಲಾಖೆ ತಿಳಿಸಿದೆ. ‘ರಂಜನಿ ಅವರು ಅಮೆರಿಕದಿಂದ ಕೆನಡಾಗೆ ತೆರಳುವ ತಯಾರಿಯಲ್ಲಿದ್ದರು’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕದಲ್ಲಿ ವಾಸಿಸುವುದು ಅಧ್ಯಯನ ಮಾಡುವುದು ಸೌಭಾಗ್ಯ. ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದರೆ ಈ ಸೌಭಾಗ್ಯವನ್ನು ಕಿತ್ತುಕೊಳ್ಳಲಾಗುವುದು.ಕ್ರಿಸ್ಟಿ ನಿಯೋಮ್, ಅಮೆರಿಕ ಗೃಹ ಭದ್ರತಾ ಇಲಾಖೆ ಕಾರ್ಯದರ್ಶಿ
ಅನುದಾನ ಕಡಿತ, ವಿದ್ಯಾರ್ಥಿಗಳ ಬಂಧನ:
‘ಯಹೂದಿ ವಿದ್ಯಾರ್ಥಿಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ನಿಷ್ಕ್ರಿಯವಾಗಿದೆ’ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಸರ್ಕಾರವು, ವಿಶ್ವವಿದ್ಯಾಲಯಕ್ಕೆ 400 ಮಿಲಿಯನ್ ಡಾಲರ್ (ಸುಮಾರು ₹3,477 ಕೋಟಿ) ಅನುದಾನವನ್ನು ಕಡಿತಗೊಳಿಸಿತ್ತು.
ಜೊತೆಗೆ, ಕಳೆದ ವರ್ಷ ಪ್ಯಾಲೆಸ್ಟೀನಿಯನ್ನರ ಪರ ಪ್ರತಿಭಟನೆ ನಡೆಸಿದ್ದ ಹಲವು ವಿದೇಶಿ ವಿದ್ಯಾರ್ಥಿಗಳನ್ನು ಗುರುತಿಸಿರುವ ಸರ್ಕಾರವು, ಕಳೆದ ಒಂದು ವಾರದಿಂದ ಕೆಲ ವಿದ್ಯಾರ್ಥಿಗಳನ್ನು ಬಂಧಿಸಿದೆ. ರಂಜನಿ ಅವರೂ ಈ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು.
ಕೆಜಿಎಫ್ ಕುರಿತು ಅಧ್ಯಯನ
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪ ಯೋಜನೆ ಮತ್ತು ಸಂರಕ್ಷಣೆ ಕಾಲೇಜಿನಲ್ಲಿ ನಗರಾಭಿವೃದ್ಧಿ ಯೋಜನೆಗಳ ಬಗ್ಗೆ ರಂಜನಿ ಅವರು ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದರು. ಪದವಿ ಅಭ್ಯಾಸದ ವೇಳೆ ಅವರು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ‘ಚಿನ್ನ ಮತ್ತು ಸೈನೇಡ್: ಗಣಿಗಾರಿಕೆಯ ನಂತರದ ಕೆಜಿಎಫ್‌ನಲ್ಲಿ (ಕೋಲಾರ ಚಿನ್ನದ ಗಣಿ) ಕೌಟುಂಬಿಕ ಜಾತಿ ಚಿತ್ರಣ’ ವಿಷಯದ ಕುರಿತು ಅಧ್ಯಯನ ಮಾಡಿದ್ದರು.
ಸದ್ಯ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ‘ಕರ್ನಾಟಕದ ಚಿನ್ನದ ಗಣಿ ಸಂಪತ್ತು ಹೇರಳವಾಗಿರುವ ಶಿಲಾಪದರಗಳ ವಲಯದ ಬದಲಾವಣೆ. ಈ ಸಂಬಂಧ 1880ರಿಂದ ಇಲ್ಲಿಯವರೆಗೆ ಹುಟ್ಟಿಕೊಂಡ ಕಾರ್ಮಿಕ ಚಳವಳಿಗಳು ರಾಜ್ಯಗಳ ರಚನೆ ಬ್ರಿಟಿಷ್ ಆಳ್ವಿಕೆ ಮತ್ತು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆದ ಆಮೂಲಾಗ್ರ ಬದಲಾವಣೆ’ ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.