ADVERTISEMENT

ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ: ಭಾರತದ ವಿದ್ಯಾರ್ಥಿಗೆ ಹನ್ನೊಂದು ಬಾರಿ ಇರಿತ

ಐಎಎನ್ಎಸ್
Published 14 ಅಕ್ಟೋಬರ್ 2022, 5:29 IST
Last Updated 14 ಅಕ್ಟೋಬರ್ 2022, 5:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಡ್ನಿ: ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಮೇಲೆ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 6ರಂದು ದಾಳಿ ನಡೆಸಲಾಗಿದ್ದು, ಚಾಕುವಿನಿಂದ 11 ಬಾರಿ ಇರಿದು ಹತ್ಯೆಗೆ ಯತ್ನಿಸಲಾಗಿದೆ.ವಿದ್ಯಾರ್ಥಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿ ಶುಭಮ್‌ ಗರ್ಗ್‌, ಉತ್ತರ ಪ್ರದೇಶದ ಆಗ್ರಾದವರು.

ನ್ಯೂ ಸೌತ್‌ ವೇಲ್ಸ್‌ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಗರ್ಗ್‌, ತಮ್ಮ ನಿವಾಸಕ್ಕೆ ವಾಪಸ್‌ ಆಗುತ್ತಿದ್ದಾಗ ಸಿಡ್ನಿಯಲ್ಲಿ ದಾಳಿಗೊಳಗಾಗಿದ್ದಾರೆ.

ADVERTISEMENT

ಈ ಸಂಬಂಧ 27 ವರ್ಷದ ಡೆನಿಯಲ್‌ ನೋರ್‌ವುಡ್‌ ಎಂಬಾತನನ್ನು ಘಟನಾ ಸ್ಥಳದಲ್ಲೇ ಬಂಧಿಸಿ, ಚಾಟ್ಸ್‌ವುಡ್‌ ಠಾಣೆಗೆ ಕರೆದೊಯ್ಯಲಾಗಿದೆ. ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ದಾಳಿಕೋರನಿಗೆಹಾರ್ನ್ಸ್‌ಬಿ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಹೀಗಾಗಿ ಡಿಸೆಂಬರ್‌ 14ರಂದು ನಡೆಯುವ ಮುಂದಿನ ವಿಚಾರಣೆವರೆಗೆ ಜೈಲಿನಲ್ಲಿ ಇರಲಿದ್ದಾನೆ ಎಂದು 'ಆಸ್ಟ್ರೇಲಿಯಾ ಟುಡೇ' ವರದಿ ಮಾಡಿದೆ.

ಪೆಸಿಫಿಕ್‌ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಗರ್ಗ್‌ ಅವರಿಗೆಹಣ ಮತ್ತು ಮೊಬೈಲ್‌ ನೀಡುವಂತೆನಾರ್ವುಡ್ ಬೆದರಿಕೆ ಹಾಕಿದ್ದ. ಇದಕ್ಕೆ ಗರ್ಗ್‌ ಒಪ್ಪದಿದ್ದಾಗ ಚಾಕುವಿನಿಂದ ಹಲವು ಬಾರಿ ಇರಿದು ಹಲ್ಲೆ ಮಾಡಿದ್ದಾನೆ ಎಂದೂ ಉಲ್ಲೇಖಿಸಿದೆ.

ಭಾರತದಲ್ಲಿರುವ ಗರ್ಗ್‌ ಕುಟುಂಬಈ ದಾಳಿಯನ್ನು ಖಂಡಿಸಿದ್ದು, ಇದೊಂದು ಜನಾಂಗೀಯ ದ್ವೇಷದ ದಾಳಿ ಎಂದು ಆರೋಪಿಸಿದೆ.

ಸಂತ್ರಸ್ತ ವಿದ್ಯಾರ್ಥಿಯ ಸಹೋದರಿ ಕಾವ್ಯ ಗರ್ಗ್‌ ಅವರು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರನ್ನು ಉಲ್ಲೇಖಿಸಿ ಅಕ್ಟೋಬರ್‌ 12ರಂದು ಟ್ವೀಟ್ ಮಾಡಿದ್ದಾರೆ.'ಉತ್ತರ ಪ್ರದೇಶದವನಾದ ನನ್ನ ಸಹೋದರ ಶುಭಮ್‌ ಗರ್ಗ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭೀಕರವಾಗಿ ಹಲ್ಲೆಗೊಳಗಾಗಿದ್ದಾನೆ.ಅವನಿಗೆ ಚಾಕುವಿನಿಂದ 11 ಬಾರಿ ಇರಿಯಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ವಿಚಾರದಲ್ಲಿ ನಾವು ನಿಮ್ಮ ನೆರವಿನನಿರೀಕ್ಷೆಯಲ್ಲಿದ್ದೇವೆ. ಕುಟುಂಬದವರಿಗೆ ತುರ್ತು ವೀಸಾ ಒದಗಿಸಿಕೊಡಿ' ಎಂದು ಮನವಿ ಮಾಡಿದ್ದಾರೆ.

ಏತನ್ಮಧ್ಯೆ ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನವನೀತ್‌ ಚಾಹಲ್‌ ಅವರು, ಸಂತ್ರಸ್ತ ವಿದ್ಯಾರ್ಥಿಯ ಕುಟುಂಬದ ವೀಸಾ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆಡಳಿತವು ವಿದೇಶಾಂಗ ಸಚಿವಾಲಯದೊಂದಿಗೆಸಮನ್ವಯ ಸಾಧಿಸುತ್ತಿದೆ.ಸಿಡ್ನಿಯಲ್ಲಿರುವ ರಾಯಭಾರ ಕಚೇರಿಯನ್ನೂ ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.