
ಬಾಂಗ್ಲಾದಲ್ಲಿ ಪ್ರತಿಭಟನೆ
ಢಾಕಾ: ಬಾಂಗ್ಲಾದೇಶದಲ್ಲಿ ಆಂತರಿಕ ಪರಿಸ್ಥಿತಿ ಹದಗೆಟ್ಟ ಕಾರಣ ಭದ್ರತಾ ಕಾರಣಗಳಿಂದಾಗಿ ಭಾರತದ ಎರಡು ವೀಸಾ ಅರ್ಜಿ ಕೇಂದ್ರಗಳನ್ನು ಗುರುವಾರ ಮುಚ್ಚಲಾಗಿದೆ.
ರಾಜ್‌ಶಾಹಿ ಮತ್ತು ಖುಲ್ನಾ ಪ್ರದೇಶಗಳಲ್ಲಿನ ಕೇಂದ್ರಗಳನ್ನು ಮುಚ್ಚಲಾಗಿದೆ.
ಭಾರತೀಯ ವೀಸಾ ಅರ್ಜಿ ಕೇಂದ್ರದ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್‌ಶಾಹಿ ಮತ್ತು ಖುಲ್ನಾ ಕೇಂದ್ರಗಳು ಡಿ.18ರಿಂದ ಮುಚ್ಚಲ್ಪಡುತ್ತವೆ. ಈ ದಿನದಂದು ವೀಸಾ ಸಲ್ಲಿಕೆಗಾಗಿ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳನ್ನು ಕಾಯ್ದಿರಿಸಿದ ಎಲ್ಲಾ ಅರ್ಜಿದಾರರಿಗೆ ಸ್ಲಾಟ್ ನೀಡಲಾಗುವುದು’ ಎಂದು ತಿಳಿಸಲಾಗಿದೆ.
ಮಾಜಿ ಪ್ರಧಾನಿ ಶೇಕ್ ಹಸೀನಾ ಅವರನ್ನು ವಾಪಸ್ ಕಳುಹಿಸಿಕೊಡುವುದು ಸೇರಿ ಅನೇಕ ವಿಚಾರಗಳಿಗೆ ಸಂಬಂಧಿಸಿ ಢಾಕಾದಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಎದುರು ‘ಜುಲೈ ಒಯಿಕ್ಯಾ’ ಸಂಘಟನೆಯ ನೂರಾರು ಸದಸ್ಯರು ಪ್ರತಿಭಟನೆ ನಡೆಸಿ, ಭಾರತ ವಿರೋಧಿ ಘೋಷಣೆಗಳನ್ನು ಬುಧವಾರ ಕೂಗಿದ್ದರು.
‘ಭಾರತ ಹೈಕಮಿಷನ್ ಕಚೇರಿ ಮೇಲೆ ದಾಳಿ ನಡೆಸುವ ಬಗ್ಗೆ ಯೋಜನೆ ಇದೆ ಎಂದು ಉಗ್ರರು ಘೋಷಿಸಿದ್ದರ ಬಗ್ಗೆ ಮಧ್ಯಂತರ ಸರ್ಕಾರವು ತನಿಖೆಯನ್ನೂ ನಡೆಸಿಲ್ಲ ಅಥವಾ ನಮ್ಮೊಂದಿಗೆ ಸಾಕ್ಷ್ಯಗಳನ್ನೂ ಹಂಚಿಕೊಂಡಿಲ್ಲ. ಇದು ದುರದೃಷ್ಟಕರ’ ಎಂದು ಬಾಂಗ್ಲಾದೇಶದ ರಾಯಭಾರಿ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿದ ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ಬೆಳಿಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.