ADVERTISEMENT

ಭಾರತದ ವೆಬ್‌ಸೈಟ್‌ಗಳನ್ನು ನೋಡದಂತೆ ವಿಪಿಎನ್ ಬ್ಲಾಕ್‌ ಮಾಡಿದ ಚೀನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2020, 11:11 IST
Last Updated 30 ಜೂನ್ 2020, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್:ವಿಪಿಎನ್‌ (ವರ್ಚುವಲ್ ಪ‍್ರೈವೇಟ್ ನೆಟ್‌ವರ್ಕ್) ಬ್ಲಾಕ್‌ ಮಾಡುವ ಮೂಲಕ ಚೀನಾ ಸರ್ಕಾರವು ಭಾರತದ ವೆಬ್‌ಸೈಟ್‌ಗಳನ್ನು ತನ್ನ ದೇಶದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ ಮಾಡಿದೆ. ಚೀನಾದ 59 ಆ್ಯಪ್‌ಗಳ ಮೇಲೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ ಈ ವಿಚಾರ ತಿಳಿದುಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಭಾರತದ ಟಿವಿ ಚಾನೆಲ್‌ಗಳನ್ನು ಈಗಿನಂತೆಯೇ ಐಪಿ ಟಿವಿ ಮೂಲಕ ನೋಡಬಹುದಾಗಿದೆ. ಆದಾಗ್ಯೂ, ಕಳೆದೆರಡು ದಿನಗಳಿಂದ ಐಫೋನ್ ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಎಕ್ಸ್‌ಪ್ರೆಸ್ ವಿಪಿಎನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೀಜಿಂಗ್‌ನಲ್ಲಿರುವ ರಾಜತಾಂತ್ರಿಕ ಮೂಲಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಸೆನ್ಸಾರ್‌ಶಿಪ್‌ ಮೀರಿ ನಿರ್ದಿಷ್ಟ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಅನುವು ಮಾಡಿಕೊಡುವ ವಿಪಿಎನ್‌ಗಳನ್ನೇ ಬ್ಲಾಕ್‌ಮಾಡಬಲ್ಲ ಅತ್ಯಾಧುನಿಕ ಫೈರ್‌ವಾಲ್‌ ಅನ್ನು ಚೀನಾ ಸೃಷ್ಟಿಸಿದೆ ಎನ್ನಲಾಗಿದೆ.

ADVERTISEMENT

ಆನ್‌ಲೈನ್ ಸೆನ್ಸಾರ್‌ಶಿಪ್‌ ವಿಚಾರದಲ್ಲಿ ಚೀನಾ ಕುಖ್ಯಾತವಾಗಿದ್ದು, ಷಿ ಜಿನ್‌ಪಿಂಗ್ ಸರ್ಕಾರವು ಇದನ್ನು ಹೈಟೆಕ್ ವಿಧಾನಗಳೊಂದಿಗೆ ಜಾರಿಗೊಳಿಸುತ್ತಿದೆ. ಉದಾಹರಣೆಗೆ; ಸಿಎನ್‌ಎನ್ ಅಥವಾ ಬಿಬಿಸಿಯಲ್ಲಿ ಹಾಂಕಾಂಗ್ ಪ್ರತಿಭಟನೆ ವಿಚಾರ ಪ್ರಸ್ತಾಪವಾದಲ್ಲಿ ತಕ್ಷಣವೇ ಆ ವೆಬ್‌ಸೈಟ್‌ಗಳ ಪರದೆ ಚೀನಾದಲ್ಲಿ ಬ್ಲ್ಯಾಂಕ್‌ ಆಗುತ್ತದೆ. ಆ ವಿಷಯ ಮರೆಯಾದ ಬಳಿಕವಷ್ಟೇ ವೆಬ್‌ಸೈಟ್‌ಗಳ ಪರದೆ ಕಾಣಿಸಿಕೊಳ್ಳುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಚೀನಾದ ಟಿಕ್‌ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್‌‌ ಮತ್ತು ವಿ–ಚಾಟ್ ಸೇರಿದಂತೆ 59 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಿ ಭಾರತ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.