ADVERTISEMENT

ಇಂಡೊನೇಷ್ಯಾ: ಮುಳುಗಿದ ಜಲಾಂತರ್ಗಾಮಿ; 53 ಸಿಬ್ಬಂದಿ ಜಲ ಸಮಾಧಿ

ಏಜೆನ್ಸೀಸ್
Published 25 ಏಪ್ರಿಲ್ 2021, 2:46 IST
Last Updated 25 ಏಪ್ರಿಲ್ 2021, 2:46 IST
ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಶೋಧ ಕಾರ್ಯಾಚರಣೆಯಲ್ಲಿರುವ ಇಂಡೊನೇಷ್ಯಾದ ನೌಕಾಪಡೆಯ ಹಡಗು
ನಾಪತ್ತೆಯಾಗಿರುವ ಜಲಾಂತರ್ಗಾಮಿಯ ಶೋಧ ಕಾರ್ಯಾಚರಣೆಯಲ್ಲಿರುವ ಇಂಡೊನೇಷ್ಯಾದ ನೌಕಾಪಡೆಯ ಹಡಗು   

ಬನ್ಯುವಾಂಗಿ, ಇಂಡೊನೇಷ್ಯಾ: ನಾಪತ್ತೆಯಾಗಿದ್ದ ಜಲಾಂತರ್ಗಾಮಿಗೆ ಸಂಬಂಧಿಸಿದ ಹಲವಾರು ವಸ್ತುಗಳು ಸಿಕ್ಕಿದ ಬೆನ್ನಲ್ಲೇ ಇಂಡೊನೇಷ್ಯಾ ನೌಕಾಪಡೆಯು, ಜಲಾಂತರ್ಗಾಮಿ ಮುಳುಗಿರುವುದಾಗಿ ಘೋಷಿಸಿದೆ. 53 ಮಂದಿ ಸಿಬ್ಬಂದಿಯನ್ನು ರಕ್ಷಿಸುವ ಭರವಸೆ ಮರೆಯಾಗಿದೆ.

ಬಾಲಿ ದ್ವೀಪದಿಂದ ಬುಧವಾರ ಪ್ರಯಾಣ ಬೆಳೆಸಿದ್ದ 'ಕೆಆರ್‌ಐ ನಂಗ್ಗಾಲಾ 402' ಜಲಾಂತರ್ಗಾಮಿಯು ನಾಪತ್ತೆಯಾಗಿತ್ತು. ಅಮೆರಿಕದ ವಿಮಾನ (ಪಿ–8 ಪೊಸಿಡಾನ್‌), ಸೋನಾರ್‌ ಸಾಧನಗಳನ್ನು ಅಳವಡಿಸಿರುವ ಆಸ್ಟ್ರೇಲಿಯಾದ ಯುದ್ಧನೌಕೆಗಳು, ಇಂಡೊನೇಷ್ಯಾದ 20 ಹಡಗುಗಳು ಹಾಗೂ ನಾಲ್ಕು ಯುದ್ಧವಿಮಾನಗಳು ಶೋಧಕಾರ್ಯಾಚರಣೆ ನಡೆಸಿದ್ದವು.

ಜಲಾಂತರ್ಗಾಮಿ ನಾಪತ್ತೆಯಾಗಿರುವ ಸ್ಥಳದಲ್ಲಿ ತೈಲ ಪದರ ಹಾಗೂ ಅವಶೇಷಗಳು ತೇಲುತ್ತಿರುವುದು ಪತ್ತೆಯಾಗಿವೆ. ಜಲಾಂತರ್ಗಾಮಿ ಮುಳುಗಿರುವುದನ್ನು ಇವು ಸೂಚಿಸುತ್ತವೆ ಎಂದು ಸೇನಾ ಮುಖ್ಯಸ್ಥ ಹಾದಿ ಜಾಜಾಟೊ ಹೇಳಿದ್ದಾರೆ.

ADVERTISEMENT

ಜಲಾಂತರ್ಗಾಮಿ ನಾಪತ್ತೆಯಾಗಿದೆ ಎಂದೇ ಇಂಡೊನೇಷ್ಯಾ ಅಧಿಕಾರಿಗಳು ಪರಿಗಣಿಸಿದ್ದರು, ಆದರೆ ಶನಿವಾರದ ವೇಳೆಗೆ ಅದರಲ್ಲಿನ ಆಮ್ಲಜನಕ ಸಂಗ್ರಹ ಖಾಲಿಯಾಗಲಿದೆ ಎಂದು ತಿಳಿಸಿದ್ದರು.

ನೌಕಾಪಡೆ ಮುಖ್ಯಸ್ಥ ಯುಡೊ ಮಾರ್ಗೊನೊ ಬಾಲಿಯಲ್ಲಿ ಮಾಹಿತಿ ನೀಡಿದ್ದು, 'ಸ್ಫೋಟವೇನಾದರೂ ಸಂಭವಿಸಿದ್ದರೆ, ಅದು ಚೂರುಚೂರಾಗಿರಲಿದೆ. ಜಲಾಂತರ್ಗಾಮಿಯು 300 ಮೀಟರ್‌ನಿಂದ 400 ಮೀಟರ್‌ಗೆ ಮತ್ತು ಅಲ್ಲಿಂದ 500 ಮೀಟರ್‌...ಸಾಗುತ್ತಿದ್ದಂತೆ ನಿಧಾನವಾಗಿ ಬಿರುಕು ಕಾಣಿಸಿಕೊಂಡಿದೆ. ಅಲ್ಲಿ ಸ್ಫೋಟವಾಗಿದ್ದರೆ ಸೋನಾರ್‌ ಅದನ್ನು ಗ್ರಹಿಸುತ್ತಿತ್ತು' ಎಂದಿದ್ದಾರೆ.

200 ಮೀಟರ್‌ (655 ಅಡಿ) ಸಮುದ್ರದ ಆಳದಿಂದ ನಾಪತ್ತೆಯಾದ ಜಲಾಂತರ್ಗಾಮಿಯು ಸುಮಾರು 600–700 ಮೀಟರ್‌ (2,000–2,300 ಅಡಿಗಳು) ಆಳದವರೆಗೂ ಇಳಿದು ಮುಳುಗಿರಬಹುದು ಎಂದು ನೌಕಾಪಡೆಯು ಅಂದಾಜಿಸಿತ್ತು. ಅಷ್ಟೊಂದು ಆಳದಲ್ಲಿನ ನೀರಿನ ಒತ್ತಡದಲ್ಲಿ ಉಳಿಯುವುದು ಅಸಾಧ್ಯವೆಂದು ಪರಿಗಣಿಸಲಾಗಿತ್ತು.

ಎಲೆಕ್ಟ್ರಿಕಲ್‌ ಕಾರ್ಯಾಚರಣೆ ವಿಫಲಗೊಂಡಿದ್ದರಿಂದ ಜಲಾಂತರ್ಗಾಮಿಯು ತುರ್ತು ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗದೆ, ಮತ್ತೆ ಮೇಲೆ ಬರುವುದು ಆಗಿಲ್ಲ ಎಂದು ನೌಕಾಪಡೆ ಹೇಳಿತ್ತು. ಆದರೆ, ಮುಳುಗಲು ನಿಖರ ಕಾರಣ ಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.