ದುಬೈ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ನಡುವೆ ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲಾಗಿದೆ ಎಂದು ನ್ಯಾಯಾಂಗ ಸಂಬಂಧಿತ ಸುದ್ದಿಗಳನ್ನು ಬಿತ್ತರಿಸುವ ಮಿಜಾನ್ ವೆಬ್‌ಸೈಟ್ ಹೇಳಿದೆ.
ಬೇಹುಗಾರಿಕೆ ನಡೆಸಿ ಮರಣದಂಡನೆಗೆ ಒಳಗಾದ ವ್ಯಕ್ತಿಯನ್ನು ಮಜೀದ್ ಮೊಸೆಯ್ಬಿ ಎಂದು ಅದು ತಿಳಿಸಿದೆ.
ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್‌ಗೆ(Mossad) ಸೂಕ್ಷ್ಮ ಮಾಹಿತಿಗಳನ್ನು ರವಾನಿಸಿದ ಆರೋಪದಡಿ ಆತ ತಪ್ಪಿತಸ್ಥನೆಂದು ಸಾಬೀತಾಗಿತ್ತು ಎಂದು ವರದಿ ತಿಳಿಸಿದೆ. ಇರಾನ್‌ನ ಸುಪ್ರೀಂ ಕೋರ್ಟ್ ಸಹ ಇದನ್ನು ಖಚಿತಪಡಿಸಿದ್ದು, ಕ್ರಿಮಿನಲ್ ವಿಚಾರಣೆ ಬಳಿಕ ಗಲ್ಲಿಗೇರಿಸಲಾಗಿದೆ ಎಂದು ತಿಳಿಸಿದೆ.
ಮೊಸೆಯ್ಬಿಯನ್ನು ಯಾವಾಗ ಬಂಧಿಸಲಾಗಿತ್ತು ಎಂಬ ಬಗ್ಗೆ ಮಿಜಾನ್ ಹೆಚ್ಚಿನ ಮಾಹಿತಿ ನೀಡಿಲ್ಲ.
ಈ ನಡುವೆ ಅಣ್ವಸ್ತ್ರ ಚಟುವಟಿಕೆ ಕೈಬಿಟ್ಟು ಶಾಂತಿ ಒಪ್ಪಂದಕ್ಕೆ ಬರುವಂತೆ ಅಮೆರಿಕ ನೀಡಿದ್ದ ಎಚ್ಚರಿಕೆ ಮೀರಿ ಇರಾನ್, ಇಸ್ರೇಲ್ ಮೇಲೆ ಭಯಾನಕ ಪ್ರತಿ ದಾಳಿ ನಡೆಸಿದೆ. ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ವರದಿಗಳು ತಿಳಿಸಿವೆ.
ಅತ್ತ, ಇರಾನ್ ವಿರುದ್ಧ ಕೆಂಡಕಾರುತ್ತಿರುವ ಅಮೆರಿಕ, ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಪ್ರಬಲ ಬಾಂಬ್ ದಾಳಿ ನಡೆಸಿದೆ. ಇದೊಂದು ಅಮೋಘ ಯಶಸ್ಸು ಎಂದು ದಾಳಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ದಾಳಿ ಬೆನ್ನಲ್ಲೇ ಇರಾನ್, ಇಸ್ರೇಲ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಮತ್ತೆ ದಾಳಿ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.