ಟೆಹರಾನ್: ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಉನ್ನತ ಸಲಹೆಗಾರ ಅಲಿ ಶಮ್ಖಾನಿ ಅವರ ಮಗಳ ಮದುವೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮದುಮಗಳ ಪಾಶ್ಚಿಮಾತ್ಯ ಶೈಲಿಯ ಉಡುಗೆಯ ಕಾರಣಕ್ಕೆ ತೀವ್ರ ವಿವಾದ ಹುಟ್ಟುಹಾಕಿದೆ.
ಈ ಮೂಲಕ ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲಿ ಶಮ್ಖಾನಿ ಮುಖವಾಡ ಕಳಚಿ ಬಿದ್ದಿದೆ.
ಕಳೆದ ವರ್ಷ ಟೆಹರಾನ್‌ನ ಐಷರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಮದುವೆಯ ಕ್ಲಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಡಿಯೊದಲ್ಲಿ ಶಮ್ಖಾನಿ ಮಗಳು ಬಿಳಿ ಬಣ್ಣದ ಸ್ಟ್ರಾಪ್‌ಲೆಸ್ ಉಡುಪನ್ನು ಧರಿಸಿದ್ದು, ಶಮ್ಖಾನಿ ಪತ್ನಿ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಿರುವುದು ಕಾಣಬಹುದು.
ಹಿಜಾಬ್ ಕಡ್ಡಾಯ ನಿಯಮವನ್ನು ದಶಕಗಳಿಂದ ಹಿಂಸಾತ್ಮಕವಾಗಿ ಹೇರಲಾಗುತ್ತಿರುವ ಇರಾನ್‌ನಲ್ಲಿ ಈ ವಿಡಿಯೊ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೋರಿಕೆಯಾದ ಮದುವೆ ವಿಡಿಯೊ ಕುರಿತು ಹಲವು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇರಾನ್ ಆಡಳಿತದ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ.
‘ಇರಾನ್‌ನ ಉನ್ನತ ನಾಯಕರಲ್ಲಿ ಒಬ್ಬರಾದ ಶಮ್ಖಾನಿ ಅವರ ಮಗಳು ಸ್ಟ್ರಾಪ್‌ಲೆಸ್ ಉಡುಪಿನಲ್ಲಿ ಅದ್ದೂರಿ ವಿವಾಹವನ್ನು ಮಾಡಿಕೊಂಡರು. ಏತನ್ಮಧ್ಯೆ, ಕೂದಲು ತೋರಿಸಿದ್ದಕ್ಕಾಗಿ ಅದೇ ಇರಾನ್‌ನಲ್ಲಿ ಸಾಮಾನ್ಯ ಮಹಿಳೆಯರನ್ನು ಹೊಡೆದು ಕೊಲ್ಲಲಾಯಿತು’ ಎಂದು ಇರಾನ್‌ನಿಂದ ಗಡಿಪಾರಾದ ಮಹಿಳಾ ಪರ ಹೋರಾಟಗಾರ್ತಿ ಮಸಿಹ್ ಅಲಿನೆಜಾದ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
‘ಇದನ್ನೇ ಬೂಟಾಟಿಕೆ ಎನ್ನುವುದು. ಇತರ ಹೆಣ್ಣುಮಕ್ಕಳಿಗೆ ಹೇಗಿರಬೇಕೆಂದು ಬೋಧಿಸುತ್ತಾರೆ. ಇವರ ಹೆಣ್ಣು ಮಕ್ಕಳು ಡಿಸೈನರ್ ಉಡುಪನ್ನು ಧರಿಸಿ ಓಡಾಡುತ್ತಾರೆ. ಗುಂಡು, ಲಾಠಿ ಪ್ರಹಾರ, ಜೈಲು ಶಿಕ್ಷೆಯ ಮೂಲಕ ಇಸ್ಲಾಮಿಕ್ ಮೌಲ್ಯಗಳನ್ನು ಹೇರುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2022ರ ಸೆಪ್ಟೆಂಬರ್ 16ರಂದು ಮಹ್ಸಾ ಅಮೀನಿ ಎಂಬ ಯುವತಿಯನ್ನು ಹಿಜಾಬ್ ಸರಿಯಾಗಿ ಹಾಕಿಲ್ಲ ಎಂಬ ಕಾರಣಕ್ಕೆ ಬಂಧಿಸಿ, ನಂತರ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದ ಸಂದರ್ಭದಲ್ಲಿಯೇ ಹಿಜಾಬ್ ಧಿಕ್ಕರಿಸಿದ್ದ ಇನ್ನಿಬ್ಬರು ಯುವತಿಯರ ಹತ್ಯೆಯಾಗಿತ್ತು. ಈ ಹತ್ಯೆಗಳು ಹಿಜಾಬ್ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿತ್ತು.
ಈ ವೇಳೆ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿದ್ದ ಶಮ್ಖಾನಿ ಪ್ರತಿಭಟನಕಾರರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಂಡಿದ್ದರು. ಹಿಂಸಾತ್ಮಕ ದಾಳಿಯಲ್ಲಿ 500ಕ್ಕೂ ಹೆಚ್ಚು ಪ್ರತಿಭಟನಕಾರರು ಮೃತಪಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.