ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಇರಾನ್

ಏಜೆನ್ಸೀಸ್
Published 29 ಜೂನ್ 2020, 13:02 IST
Last Updated 29 ಜೂನ್ 2020, 13:02 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರ ಕೆಲವು ವ್ಯಕ್ತಿಗಳ ಬಂಧನಕ್ಕೆ ಇರಾನ್ ವಾರಂಟ್ ಹೊರಡಿಸಿದ್ದು, ಇಂಟರ್‌ಪೋಲ್ ಸಹಾಯ ಕೋರಿದೆ. ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆ ಮಾಡಿದ್ದ ವಿಚಾರವಾಗಿ ಇರಾನ್ ಈ ಕ್ರಮ ಕೈಗೊಂಡಿದೆ.

ಟ್ರಂಪ್‌ಗೆ ಬಂಧನದ ಭೀತಿ ಇಲ್ಲವಾದರೂ ಇತರ ರಾಷ್ಟ್ರಗಳೊಂದಿಗೆ ಇರಾನ್ ಮಾಡಿಕೊಂಡಿರುವ ಪರಮಾಣು ಒಪ್ಪಂದದಿಂದ ಅಮೆರಿಕ ಏಕಪಕ್ಷೀಯವಾಗಿ ಹಿಂದೆ ಸರಿದ ಬಳಿಕ ಉಭಯ ದೇಶಗಳ ನಡುವಣ ಉದ್ವಿಗ್ನತೆ ಹೆಚ್ಚಾಗಿದೆ.

‘ಜನವರಿ 3ರಂದು ಬಾಗ್ದಾದ್‌ನಲ್ಲಿ ನಡೆದ ಖಾಸಿಂ ಸೋಲೆಮನಿ ಹತ್ಯೆಯಲ್ಲಿ ಟ್ರಂಪ್ ಸೇರಿ 30 ಮಂದಿಯ ಕೈವಾಡವಿರುವುದಾಗಿ ಇರಾನ್ ಆರೋಪಿಸಿದೆ. ಅವರೆಲ್ಲ ಕೊಲೆ ಮತ್ತು ಭಯೋತ್ಪಾದನೆ ಪ್ರಕರಣ ಎದುರಿಸುತ್ತಿದ್ದಾರೆ’ ಎಂದು ಟೆಹ್ರಾನ್‌ನ ಸರ್ಕಾರಿ ವಕೀಲ ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ.

ADVERTISEMENT

ಟ್ರಂಪ್‌ ಹೊರತುಪಡಿಸಿ ಇತರ ಆರೋಪಿಗಳ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಆದರೆ, ಟ್ರಂಪ್‌ ವಿರುದ್ಧದ ಕಾನೂನು ಸಮರವನ್ನು ಅವರ ಅಧ್ಯಕ್ಷತೆ ಅವಧಿ ಮುಗಿದ ನಂತರವೂ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಫ್ರಾನ್ಸ್‌ನ ಲಿಯಾನ್ ಮೂಲದ ಇಂಟರ್‌ಪೋಲ್ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಟ್ರಂಪ್‌ ಮತ್ತು ಇತರರ ವಿರುದ್ಧ ‘ರೆಡ್‌ ಕಾರ್ನರ್ ನೋಟಿಸ್’ ಹೊರಡಿಸುವಂತೆಯೂ ಇರಾನ್ ಮನವಿ ಮಾಡಿದೆ ಎಂದು ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ.

ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಇರಾನ್‌ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿ ಅವರನ್ನು ಅಮೆರಿಕ ಜನವರಿ 3ರಂದು ಹತ್ಯೆ ಮಾಡಿತ್ತು. ವಿದೇಶಗಳಲ್ಲಿ ಅಮೆರಿಕ ಪ್ರಜೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಅಧ್ಯಕ್ಷರು ತೆಗೆದುಕೊಂಡ ಸ್ಪಷ್ಟ ನಿರ್ಧಾರದಂತೆ ಕಾರ್ಯಾಚರಣೆ ನಡೆದಿದೆ ಎಂದು ಅಮೆರಿಕ ಸೇನೆ ಬಳಿಕ ಸ್ಪಷ್ಟನೆ ನೀಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.