
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ ಇರಾನ್ ಆಡಳಿತವು 800 ಪ್ರತಿಭಟನಾಕಾರರ ಮರಣದಂಡನೆಗೆ ತಡೆ ಹಿಡಿದಿದೆ ಎಂದು ಶ್ವೇತಭವನ ತಿಳಿಸಿದೆ.
ಹಣದುಬ್ಬರ ಹಾಗೂ ಆಡಳಿತದ ವಿರುದ್ಧ ಇರಾನ್‌ನಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನು ಹತ್ತಿಕ್ಕಲು, ವಿದ್ಯುತ್ ಹಾಗೂ ಇಂಟರ್ನೆಟ್ ಸ್ಥಗಿತದಂತಹ ಕ್ರಮಗಳನ್ನು ಸರ್ಕಾರ ಅನುಸರಿಸುತ್ತಿದೆ.
ಅಮೆರಿಕವು ಸೇನಾ ಕಾರ್ಯಾಚರಣೆಯಿಂದ ಹಿಂದೆ ಸರಿದಿದೆಯಾದರೂ, 'ಅಧ್ಯಕ್ಷರ ಮುಂದೆ ಎಲ್ಲ ಆಯ್ಕೆಗಳೂ ಇವೆ' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೊಲಿನ್ ಲೀವಿಟ್ ಸ್ಪಷ್ಟಪಡಿಸಿದ್ದಾರೆ.
'ನಿನ್ನೆ (ಗುರುವಾರ) 800 ಪ್ರತಿಭಟನಾಕಾರರನ್ನು ಮರಣದಂಡನೆಗೆ ಗುರಿಪಡಿಸುವುದನ್ನು ನಿಲ್ಲಿಸಲಾಗಿದೆ ಎಂಬುದನ್ನು ಅಧ್ಯಕ್ಷರಿಗೆ ತಿಳಿಸಲಾಗಿದೆ' ಎಂದು ಮಾಹಿತಿ ನೀಡಿರುವ ಕರೊಲಿನ್, 'ಪ್ರತಿಭಟನಾಕಾರರ ಹತ್ಯೆ ಮುಂದುವರಿದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಾಗಿ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದರು' ಎಂದಿದ್ದಾರೆ.
ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ ಸಂಘಟನೆ, ಇರಾನ್ ಸೇನೆಯು ಇದುವರೆಗೆ 3,428 ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ. ಈ ಸಂಖ್ಯೆ ಇನ್ನೂಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಪ್ರತಿಭಟನಾಕಾರರಿಗೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.