
ದುಬೈ: ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಭದ್ರತಾ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತವೆ ಎಂದು ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡರೆ ಅವರ ನೆರವಿಗೆ ಧಾವಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಎಚ್ಚರಿಕೆಗೆ ಖಮೇನಿ ತಿರುಗೇಟು ನೀಡಿದ್ದಾರೆ.
ಟೆಹರಾನ್‌ನಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಖಮೇನಿ, ‘ಟ್ರಂಪ್ ಅವರ ಕೈಗಳಲ್ಲಿ ಇರಾನಿಯರ ರಕ್ತದ ಕಲೆ ಇದೆ. ಅವರನ್ನು ಮೆಚ್ಚಿಸುವ ಸಲುವಾಗಿ ಪ್ರತಿಭಟನಕಾರರು ತಮ್ಮ ನೆಲವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಭನಕಾರರ ನೆರವಿಗೆ ಬರುವುದಾಗಿ ಹೇಳಿದ್ದಾರೆ. ಅದಕ್ಕೂ ಮೊದಲು ಟ್ರಂಪ್ ತಮ್ಮದೇ ದೇಶದ ಬಗ್ಗೆ ಗಮನಹರಿಸಲಿ’ ಎಂದು ಸಲಹೆ ನೀಡಿದರು.
ಸರ್ಕಾರಿ ಸ್ವಾಮ್ಯದ ಮಾಧ್ಯಮ ಪ್ರತಿಭಟನಕಾರರನ್ನು ಭಯೋತ್ಪಾದಕರು ಎಂದು ಪದೇ ಪದೇ ಹೇಳಿದೆ.
‘ಪ್ರತಿಭಟನಕಾರರಿಗೆ ನಿರ್ಣಾಯಕ, ಗರಿಷ್ಠ ಮತ್ತು ಕಾನೂನಿನ ವಿನಾಯಿತಿ ಇಲ್ಲದೇ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಇರಾನ್‌ನ ನ್ಯಾಯಾಂಗ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಇಂಟರ್‌ನೆಟ್ ಸ್ಥಗಿತ: ಗುರುವಾರ ರಾತ್ರಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡ ಪರಿಣಾಮ ಇಂಟರ್‌ನೆಟ್, ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು.
ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರಗಳಲ್ಲಿ ಈವರೆಗೆ 42 ಮಂದಿ ಮೃತಪಟ್ಟಿದ್ದಾರೆ. 2270ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.