ADVERTISEMENT

ಅಮೆರಿಕ, ಇಸ್ರೇಲ್‌ ದಾಳಿಗೆ ಇರಾನ್‌ ಪ್ರತಿ ದಾಳಿ: ವೇಳೆ ಕನಿಷ್ಠ 9 ಮಂದಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 21:31 IST
Last Updated 1 ಮಾರ್ಚ್ 2026, 21:31 IST
<div class="paragraphs"><p>ಅಯತೊಲ್ಲಾ ಖಮೇನಿ ಅವರ ಸಾವಿನ ಸುದ್ದಿ ತಿಳಿದ ಬಳಿಕ ಸರ್ಕಾರದ ಬೆಂಬಲಿಗರು ಟೆಹರಾನ್‌ನಲ್ಲಿ ಜಮಾವಣೆಗೊಂಡು ಶೋಕ ವ್ಯಕ್ತಪಡಿಸಿದರು</p></div>

ಅಯತೊಲ್ಲಾ ಖಮೇನಿ ಅವರ ಸಾವಿನ ಸುದ್ದಿ ತಿಳಿದ ಬಳಿಕ ಸರ್ಕಾರದ ಬೆಂಬಲಿಗರು ಟೆಹರಾನ್‌ನಲ್ಲಿ ಜಮಾವಣೆಗೊಂಡು ಶೋಕ ವ್ಯಕ್ತಪಡಿಸಿದರು

   

ಪಿಟಿಐ

ಟೆಹರಾನ್‌/ಜೆರುಸಲೇಮ್/ದುಬೈ: ಅಮೆರಿಕ ಹಾಗೂ ಇಸ್ರೇಲ್‌ ತನ್ನ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್‌ ಕೂಡ ಭಾನುವಾರ ದಾಳಿ ನಡೆಸಿದೆ.

ADVERTISEMENT

ಇಸ್ರೇಲ್‌ ಕೇಂದ್ರ ಭಾಗದ ನಗರ ಬೆಟ್‌ ಶೆಮೆಷ್‌ ಮೇಲೆ ಇರಾನ್‌ ನಡೆಸಿದ ಕ್ಷಿಪಣಿಗಳ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ಇರಾನ್‌ ಉಡಾಯಿಸಿದ ಕ್ಷಿಪಣಿಯೊಂದು ನಗರದ ಕಟ್ಟಡಕ್ಕೆ ಅಪ್ಪಳಿಸಿತು. ಈ ದಾಳಿಯಲ್ಲಿ, 9 ಜನರು ಸಾವಿಗೀಡಾದರು ಹಾಗೂ 23 ಮಂದಿ ಗಾಯಗೊಂಡಿದ್ದಾರೆ’ ಎಂದು ತುರ್ತು ಸೇವೆ ಒದಗಿಸುವ ಸಂಸ್ಥೆ ಎಂಡಿಎ ಹೇಳಿದೆ.

ಇರಾಕ್‌ ಗಡಿಗೆ ಹೊಂದಿಕೊಂಡ, ಇರಾನ್‌ನ ಮೆಹ್ರಾನ್‌ ನಗರದಲ್ಲಿರುವ ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ 43 ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. 

ದಾಳಿ: ಕೊಲ್ಲಿ ರಾಷ್ಟ್ರಗಳ ವಿವಿಧ ನಗರಗಳನ್ನು ಗುರಿಯಾಗಿಸಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದೆ.

ರಿಯಾದ್‌, ದುಬೈ, ಅಬುಧಾಬಿ, ದೋಹಾ, ಮನಾಮ, ಇಸ್ರೇಲ್‌ನ ಟೆಲ್‌ ಅವೀವ್ ಹಾಗೂ ಜೆರುಸಲೇಮ್‌ ನಗರಗಳ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದೆ.

ಕೊಲ್ಲಿ ಹಾಗೂ ಇರಾಕ್‌ನ ಕುರ್ದಿಸ್ತಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾಗಿ ಇರಾನ್ ಸೇನೆ ಹೇಳಿದೆ.

ಅಣ್ವಸ್ತ್ರ ಕಾರ್ಯಕ್ರಮ ವಿವಾದಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಇರಾನ್‌ ನಡುವಿನ ಮಾತುಕತೆಗೆ ಒಮಾನ್ ಮಧ್ಯಸ್ಥಿಕೆ ವಹಿಸಿತ್ತು. ಆದರೆ, ಶನಿವಾರ ಆರಂಭಿಸಿದ್ದ ಪ್ರತಿದಾಳಿ ವೇಳೆ ಒಮಾನ್‌ಅನ್ನು ಕೂಡ ಇರಾನ್‌ ಪಡೆಗಳು ಗುರಿಯಾಗಿಸಿದ್ದವು. ಭಾನುವಾರ ನಡೆಸಿದ ದಾಳಿಯಲ್ಲಿ ಒಮಾನ್‌ನ ದುಕಮ್ ಬಂದರು ಗುರಿಯಾಗಿಸಿ ಎರಡು ಡ್ರೋನ್‌ಗಳಿಂದ ದಾಳಿ ನಡೆಸಿತು. ಈ ಘಟನೆಯಲ್ಲಿ ಒಬ್ಬ ವಿದೇಶಿ ಕಾರ್ಮಿಕ ಮೃತಪಟ್ಟಿದ್ದಾಗಿ ಒಮಾನ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಶೋಕ–ಸಂಭ್ರಮ: ಖಮೇನಿ ಅವರ ಹತ್ಯೆಗೆ ಇರಾನ್‌ನಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅವರ ಹತ್ಯೆ ಸುದ್ದಿ ತಿಳಿಯುತ್ತಲೇ, ಟೆಹರಾನ್‌ನಲ್ಲಿ ಕೆಲವೆಡೆ ಜನರು ಗುಂಪಾಗಿ ಜಮಾಯಿಸಿ, ಶೋಕ ವ್ಯಕ್ತ ಪಡಿಸಿದರು. ತಮ್ಮ ನಾಯಕನ ಹತ್ಯೆಗೆ ರೋದಿಸಿದರು. ಟೆಹರಾನ್‌ನ ಕೆಲವಡೆ ಜನರು ಬೀದಿಗಳಿದು ಸಂಭ್ರಮಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.