
ಇರಾನ್ ಧ್ವಜ
ಶ್ರೀನಗರ: ಇರಾನ್‌ನಲ್ಲಿ ಶಾಂತಿ–ಸುವ್ಯವಸ್ಥೆ ಹದಗೆಟ್ಟಿದ್ದು, ಅಲ್ಲಿಗೆ ಭಾರತೀಯರು ಪ್ರವಾಸ ಮಾಡಬಾರದು ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.
‘ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಭಾರತೀಯ ಪ್ರಜೆಗಳು ಇಸ್ಲಾಮಿಕ್ ಗಣರಾಜ್ಯ ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು. ಅಲ್ಲಿ ವಾಸಿಸುತ್ತಿರುವ ಭಾರತೀಯರು ಮತ್ತು ಪಿಐಒಗಳು (ಭಾರತೀಯ ಮೂಲದ ವ್ಯಕ್ತಿಗಳು) ಎಚ್ಚರಿಕೆ ವಹಿಸಬೇಕು. ಪ್ರತಿಭಟನಾ ಪ್ರದೇಶಗಳಿಗೆ ಭೇಟಿ ನೀಡಬಾರದು’ ಎಂದು ಸಲಹೆ ನೀಡಿದೆ.
ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ಸೇರಿದಂತೆ ಎಲ್ಲ ಭಾರತೀಯರು ಲಭ್ಯವಿರುವ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಇರಾನ್‌ನಿಂದ ಹೊರಹೋಗಬೇಕು ಎಂದು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.
ಭಾರತೀಯ ಪ್ರಜೆಗಳು ತಮ್ಮ ಪಾಸ್‌ಪೋರ್ಟ್ ಸೇರಿದಂತೆ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಇರಾನ್‌ನಲ್ಲಿ ನಿವಾಸಿ ವೀಸಾಗಳಲ್ಲಿ ವಾಸಿಸುವ ಭಾರತೀಯರು ಸಹ ರಾಯಭಾರಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದೆ.
ವಿದ್ಯಾರ್ಥಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಭಾರತೀಯರು ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ.
ಆಡಳಿತ ವಿರೋಧಿ ಪ್ರತಿಭಟನಕಾರರ ಮೇಲೆ ಇರಾನ್ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಹಿಂಸಾಚಾರದಿಂದ ಈವರೆಗೆ 2,500ಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ.
ತಾಯ್ನಾಡಿಗೆ ಕರೆತನ್ನಿ:
ಇರಾನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವಂತೆ ಒತ್ತಾಯಿಸಿ ಪೋಷಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶ್ರೀನಗರದ ಪ್ರೆಸ್ ಎನ್‌ಕ್ಲೇವ್‌ನಲ್ಲಿ ಜಮಾಯಿಸಿದ ಪೋಷಕರು, ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇರಾನ್‌ನಲ್ಲಿ ತಲೆದೋರಿರುವ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ‘ಎಕ್ಸ್’ನಲ್ಲಿ ಗುರುವಾರ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.