ADVERTISEMENT

ಬಾಗ್ದಾದ್: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 12:34 IST
Last Updated 14 ಜನವರಿ 2022, 12:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬಾಗ್ದಾದ್: ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿಯನ್ನು ಗುರಿಯಾಗಿಸಿ 4 ರಾಕೆಟ್‌ಗಳನ್ನು ಪ್ರಯೋಗಿಸಲಾಗಿದೆ ಎಂದು ಇರಾಕ್‌ನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ಭದ್ರತೆಯ, ಹಸಿರು ವಲಯವಾಗಿರುವ ಈ ಪ್ರದೇಶದಲ್ಲಿ ಅಮೆರಿಕ ರಾಯಭಾರ ಕಚೇರಿಯಲ್ಲದೆ ವಿವಿಧ ರಾಯಭಾರ ಕಚೇರಿಗಳು, ಇರಾಕ್‌ ಸರ್ಕಾರದ ಸಚಿವಾಲಯವೂ ಇದೆ.

ಮೂರು ರಾಕೆಟ್‌ಗಳು ಅಮೆರಿಕದ ರಾಯಭಾರ ಕಚೇರಿಯ ಬಳಿ ಹಾಗೂ ಒಂದು ರಾಕೆಟ್‌ ಸಮೀಪದ ವಸತಿ ಸಂಕೀರ್ಣಕ್ಕೆ ಹೊಂದಿಕೊಂಡಿದ್ದ ಶಾಲೆಯ ಮೇಲೆ ಬಿದ್ದಿದೆ.

ADVERTISEMENT

ರಾಕೆಟ್ ದಾಳಿಯಲ್ಲಿ ಬಾಲಕಿ ಮತ್ತು ಮಹಿಳೆ ಗಾಯಗೊಂಡಿದ್ದಾರೆ ಎಂದು ಇರಾಕ್‌ನ ಸೇನೆ ಹೇಳಿಕೆ ನೀಡಿದ್ದು, ಹೆಚ್ಚು ವಿವರ ನೀಡಿಲ್ಲ. ಬಾಗ್ದಾದ್‌ ಪಕ್ಕದಲ್ಲಿನ ಡೊರಾದಿಂದ ಈ ರಾಕೆಟ್‌ ಪ್ರಯೋಗಿಸಲಾಗಿದೆ ಎಂದಿದೆ.

ಈ ವರ್ಷದ ಆರಂಭದಿಂದಲೂ ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್ ಮತ್ತು ಡ್ರೋನ್‌ ದಾಳಿ ನಡೆಯುತ್ತಿದೆ. ಇರಾನ್‌ನ ಮಿಲಿಟರಿ ಕಮಾಂಡರ್‌ ಅಬು ಮಹ್ದಿ ಅಲ್‌ ಮುಹಾಂಡಿಸ್‌ ಹತ್ಯೆಯಾಗಿದ್ದ ಅಮೆರಿಕದ ದಾಳಿಯಾಗಿ ಎರಡನೇ ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಈ ದಾಳಿ ನಡೆಯುತ್ತಿರುವುದು ಗಮನಾರ್ಹ.

ಕಳೆದ ವಾರ ಇರಾಕ್‌ ಮತ್ತು ಸಿರಿಯಾದಲ್ಲಿರುವ ಅಮೆರಿಕದ ಸೇನೆಯನ್ನು ಗುರಿಯಾಗಿಸಿ ಸರಣಿ ದಾಳಿ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.