ADVERTISEMENT

ಕಿಮ್‌ ಜಾಂಗ್‌ ಉನ್‌ ಸಾವಿನ ಕುರಿತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಊಹಾಪೋಹ

ಏಜೆನ್ಸೀಸ್
Published 26 ಏಪ್ರಿಲ್ 2020, 1:53 IST
Last Updated 26 ಏಪ್ರಿಲ್ 2020, 1:53 IST
ಕಿಮ್‌ ಜಾಂಗ್‌ ಉನ್
ಕಿಮ್‌ ಜಾಂಗ್‌ ಉನ್   

ಸೋಲ್:ಉತ್ತರ ಕೊರಿಯಾದ ಪರಮೋಚ್ಚ ನಾಯಕ ಕಿಮ್‌ ಜಾಂಗ್‌ ಉನ್‌ ಮೃತಪಟ್ಟಿರುವ ಶಂಕೆಯಿದೆ ಎಂದು ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಕುರಿತು ಅಧಿಕೃತ ಪ್ರಕಟಣೆ ಈವರೆಗೆ ಮಾಡಲಾಗಿಲ್ಲ.

ಉನ್‌ ಅವರು ಹೃದಯ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಅಪಾಯದಲ್ಲಿದ್ದಾರೆ ಎಂಬುದು ಇತ್ತೀಚೆಗೆ ಮಾಧ್ಯಮಗಳ ವರದಿಯಿಂದ ಬಹಿರಂಗವಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಈಚೆಗೆ ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಉನ್ ಮೃತಪಟ್ಟಿದ್ದಾರೆ ಎಂದು ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ಶನಿವಾರ ರಾತ್ರಿ ಮತ್ತು ಭಾನುವಾರ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ವರದಿ ಮಾಡಿವೆ. ಟ್ವಿಟರ್‌ನಲ್ಲಿಯೂ #KIMJONGUNDEAD ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಕಿಮ್‌ ಜಾಂಗ್‌ ಉನ್‌ ಮೃತಪಟ್ಟಿದ್ದಾರೆ ಎಂದು ಶನಿವಾರ ಸಂಜೆ ಹಾಂಕಾಂಗ್‌ನ ಸ್ಯಾಟಲೈಟ್ ಟಿವಿ ವರದಿ ಮಾಡಿರುವುದಾಗಿ ನಾರ್ತ್‌ಈಸ್ಟ್‌ ನೌ ಜಾಲತಾಣ ವರದಿ ಮಾಡಿದೆ. ಕಿಮ್‌ ಅವರು ಶುಕ್ರವಾರವೇ ಮೃತಪಟ್ಟಿದ್ದಾರೆ ಎಂದು ಸ್ಯಾಟಲೈಟ್ ಟಿವಿಯ ಹಿರಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.

ಈ ಮಧ್ಯೆ, ಕಿಮ್‌ ಜಾಂಗ್‌ ಉನ್‌ ಅವರಿಗೆ ಸಲಹೆ ನೀಡಲು ಚೀನಾದಿಂದ ವೈದ್ಯಕೀಯ ತಜ್ಞರನ್ನು ಒಳಗೊಂಡ ತಂಡವನ್ನು ಕಳುಹಿಸಲಾಗಿದೆ ಎಂದೂ ಶನಿವಾರ ವರದಿಯಾಗಿತ್ತು.

ಉತ್ತರ ಕೊರಿಯಾದ ಪ್ರಮುಖ ದಿನವಾದ ಏಪ್ರಿಲ್ 15ರಂದು (ದೇಶದ ಸಂಸ್ಥಾಪಕರಿಗೆ ಅಂದರೆ, ಕಿಮ್ ಅವರ ಅಜ್ಜ ಕಿಮ್ ಸುಂಗ್‌ಗೆ ಗೌರವ ಸೂಚಿಸುವ ದಿನ) ಕಿಮ್ ಬಹಿರಂಗವಾಗಿ ಕಾಣಿಸಿಕೊಳ್ಳದಿರುವಾಗಲೇ ಅವರ ಆರೋಗ್ಯದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಏಪ್ರಿಲ್ 25ರಂದು ಸಶಸ್ತ್ರ ಪಡೆಗಳ 88ನೇ ಸ್ಥಾಪನಾ ದಿವಸದಂದೂ ಕಿಮ್ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ಶಸ್ತ್ರಚಿಕಿತ್ಸೆ ಬಳಿಕ ಕಿಮ್ ಅವರು ತೀರಾ ಗಂಭೀರ ಸ್ಥಿತಿಯಲ್ಲಿರುವುದಾಗಿ ಜಪಾನ್‌ ನಿಯತಕಾಲಿಕೆಯೂ ವರದಿ ಮಾಡಿತ್ತು. ಆದರೆ, ಉತ್ತರ ಕೊರಿಯಾ ಮಾತ್ರ ತನ್ನ ನಾಯಕನ ಆರೋಗ್ಯ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳನ್ನು ಈವರೆಗೆ ಅತ್ಯಂತ ರಹಸ್ಯವಾಗಿಟ್ಟಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.