
ಇಸ್ಲಾಮಾಬಾದ್ ಸ್ಫೋಟ
(ರಾಯಿಟರ್ಸ್ ಚಿತ್ರ)
ಇಸ್ಲಾಮಾಬಾದ್: ಇಸ್ಲಾಮಾಬಾದ್ ಬಾಂಬ್ ಸ್ಫೋಟದಲ್ಲಿ ಭಾರತದ ನಂಟು ಇದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿ ಹಾಕಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಶಿಮಾ ಮಸೀದಿ ಆವರಣದಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಆತ್ಮಾಹುತಿ ಬಾಂಬರ್ ಒಬ್ಬರು ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ 31 ಜನ ಮೃತಪಟ್ಟು, 169 ಮಂದಿ ಗಾಯಗೊಂಡಿದ್ದರು. 'ಖದೀಜತ್ ಉಲ್ ಕುಬ್ರಾ' ಮಸೀದಿಯಲ್ಲಿ ಪ್ರಬಲ ಸ್ಫೋಟ ಸಂಭವಿಸಿತ್ತು.
ಈ ಕೃತ್ಯವನ್ನು ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇದು ನಿಜಕ್ಕೂ ದುರದೃಷ್ಟಕರ ಎಂದಿದೆ.
ಆದರೆ ಪಾಕಿಸ್ತಾನದ ತನ್ನ ಸಾಮೂಹಿಕ ರಚನೆಯಿಂದ ಕಾಡುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು, ತನ್ನ ಆಂತರಿಕ ಸಮಸ್ಯೆಗಳನ್ನು ಮರೆಮಾಚಲು ಸುಳ್ಳು ನಿರೂಪಿಸಿ ಇತರರ ಮೇಲೆ ದೂಷಿಸುತ್ತಿರುವುದು ದುರದೃಷ್ಟಕರ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಸ್ಫೋಟ ಸಂಬಂಧ ಪಾಕಿಸ್ತಾನ ಭಾರತದ ಮೇಲೆ ಮಾಡಿರುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕುತ್ತದೆ. ಅಲ್ಲದೆ ಇದು ಸುಳ್ಳು ಹಾಗೂ ಆಧಾರರಹಿತವಾಗಿದೆ ಎಂದು ಹೇಳಿದೆ.
ಈ ಮೊದಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್, ಇಸ್ಲಾಮಾಬಾದ್ ದಾಳಿಯ ಹಿಂದೆ ಭಾರತ ಹಾಗೂ ಅಫ್ಗಾನಿಸ್ತಾನದ ನಂಟು ಇದೆ ಎಂದು ಆರೋಪಿಸಿದ್ದರು. ಇದೊಂದು ಭಯೋತ್ಪಾದಕ ದಾಳಿಯಾಗಿದ್ದು, ಭಾರತ ಹಾಗೂ ಅಫ್ಗಾನಿಸ್ತಾನ ನಡುವಣ ಒಳಸಂಚು ಬಹಿರಂಗವಾಗಿದೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.