ADVERTISEMENT

ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 2 ವಾರ ಜಾಮೀನು ನೀಡಿದ ಇಸ್ಲಾಮಾಬಾದ್ ಹೈಕೋರ್ಟ್

ಪಿಟಿಐ
Published 12 ಮೇ 2023, 10:55 IST
Last Updated 12 ಮೇ 2023, 10:55 IST
ಇಮ್ರಾನ್ ಖಾನ್‌
ಇಮ್ರಾನ್ ಖಾನ್‌   

ಇಸ್ಲಾಮಾಬಾದ್ : ಭ್ರಷ್ಟಾಚಾರ ಪ್ರಕರಣದ ಸಂಬಂಧ ಇಲ್ಲಿನ ಹೈಕೋರ್ಟ್‌ ವಿಶೇಷ ಪೀಠ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಅವರಿಗೆ ಶುಕ್ರವಾರ ಎರಡು ವಾರ ಅವಧಿಗೆ ಜಾಮೀನು ಮಂಜೂರು ಮಾಡಿತು.

ಅಲ್‌ ಖದೀರ್ ಟ್ರಸ್ಟ್‌ ಸಂಬಂಧಿತ ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಮೂರ್ತಿಗಳಾದ ಮಿಯಾಂಗುಲ್‌ ಹಸನ್‌ ಔರಂಗಜೇಬ್ ಮತ್ತು ಸಾಮನ್‌ ರಾಫತ್‌ ಇಮ್ತಿಯಾಜ್‌ ಅವರಿದ್ದ ಪೀಠ ಜಾಮೀನು ನೀಡಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿ ರೇಂಜರ್ಸ್ ಭದ್ರತಾ ಪಡೆ ಇಮ್ರಾನ್ ಖಾನ್‌ ಅವರನ್ನು ಮಂಗಳವಾರವಷ್ಟೇ ಹೈಕೋರ್ಟ್ ಆವರಣದಿಂದಲೇ ಬಂಧಿಸಿತ್ತು. ಬಳಿಕ ಈ ಕ್ರಮವನ್ನು ಕಾನೂನು ಬಾಹಿರ ಎಂದು ಘೋಷಿಸಿದ್ದ ಸುಪ್ರಿಂ ಕೋರ್ಟ್‌ ಗುರುವಾರವಷ್ಟೇ ಇಮ್ರಾನ್‌ ಖಾನ್‌ ಬಿಡುಗಡೆಗೆ ಆದೇಶ ನೀಡಿತ್ತು.

ADVERTISEMENT

ಶುಕ್ರವಾರ ಬಿಗಿ ಭದ್ರತೆಯಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11.30ಕ್ಕೆ ಕೋರ್ಟ್‌ಗೆ ಆಗಮಿಸಿದ 70 ವರ್ಷ ವಯಸ್ಸಿನ ಇಮ್ರಾನ್‌ ಖಾನ್‌ ಅವರು ನಿಯಮಾನುಸಾರ ಗುರುತು ಪತ್ತೆ ಪರೀಕ್ಷೆಗೆ ಒಳಪಟ್ಟರು.

ಬೆಳಿಗ್ಗೆ ವಿಚಾರಣೆ ಆರಂಭಕ್ಕೂ ಮುನ್ನ ವಕೀಲರೊಬ್ಬರು ಕಲಾಪ ಕೊಠಡಿಯಲ್ಲಿಯೇ ಖಾನ್‌ ಪರವಾಗಿ ಘೋಷಣೆಯನ್ನು ಕೂಗಿದರು. ಈ ಹಂತದಲ್ಲಿ ಭದ್ರತಾ ಕಾರಣಗಳಿಂದಾಗಿ ವಿಚಾರಣೆ ವಿಳಂಬವಾಯಿತು.

ವಕೀಲರು ಘೋಷಣೆ ಕೂಗಿದ ಬೆಳವಣಿಗೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಶುಕ್ರವಾರದ ಪ್ರಾರ್ಥನೆ ಬಳಿಕ ವಿಚಾರಣೆಯು ಆರಂಭವಾಗಲಿದೆ ಎಂದು ಪ್ರಕಟಿಸಿ ಹೊರನಡೆದರು.

ಸ್ಥಳೀಯ ಡಾನ್ ಪತ್ರಿಕೆ ವರದಿ ಅನುಸಾರ, ಖಾನ್‌ ಪರ ವಕೀಲರು ಹೆಚ್ಚುವರಿಯಾಗಿ ನಾಲ್ಕು ಅರ್ಜಿಗಳನ್ನು ಸಲ್ಲಿಸಿದ್ದು, ದಾಖಲಾದ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ಕೋರಿದರು.

ಅಲ್‌ ಖದೀರ್‌ ಟ್ರಸ್ಟ್‌ಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಭ್ರಷ್ಟಾಚಾರ ನಡೆಸಿದ ಆರೋಪದಲ್ಲಿ ಎನ್‌ಎಬಿ ಸಿಬ್ಬಂದಿ ಖಾನ್‌ ಅವರನ್ನು ಮಂಗಳವಾರ ಹೈಕೋರ್ಟ್ ಆವರಣದಲ್ಲಿಯೇ ಬಂಧಿಸಿದ್ದರು.

ಬಂಧನಕ್ಕೆ ಪಾಕ್‌ನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ್ದು, ಹಿಂಸೆಯಲ್ಲಿ ಹಲವರು ಗಾಯಗೊಂಡಿದ್ದರು. ಪಂಜಾಬ್, ಖೈಬರ್ ಪಖ್ತುಂಖ್ವಾ, ಬಲೂಚಿಸ್ತಾನ ಪ್ರಾಂತ್ಯ, ಲಾಹೋರ್, ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದಿತ್ತು. 

ಇಮ್ರಾನ್‌ ಬಂಧನ ಕ್ರಮವನ್ನು ಈ ಮೊದಲು ಇಸ್ಲಾಮಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ಪೀಠವು, ಬಂಧನವನ್ನು ಅಸಿಂಧುಗೊಳಿಸಿ ಬಿಡುಗಡೆಗೆ ಆದೇಶಿಸಿತ್ತು. ಇಮ್ರಾನ್‌ಖಾನ್ ಅವರನ್ನು ತನ್ನ ಎದುರು ಹಾಜರುಪಡಿಸಬೇಕು ಎಂದು ಸೂಚಿಸಿತ್ತು.

‘ಸುಪ್ರೀಂ’ನದು ದ್ವಿಮುಖ ಧೋರಣೆ ಪ್ರಧಾನಿ ಶೆಹಬಾಜ್ ಶರೀಫ್‌ ತರಾಟೆ

ಇಸ್ಲಾಮಾಬಾದ್ (ಪಿಟಿಐ): ‘ಸುಪ್ರೀಂ ಕೋರ್ಟ್‌ ತನ್ನ ‘ಆಪ್ತ’ ಇಮ್ರಾನ್‌ ಖಾನ್‌ ಅವರಿಗೆ ಜಾಮೀನು ನೀಡಿದೆ. ಸುಪ್ರೀಂ ಕೋರ್ಟ್‌ನ ಈ ದ್ವಿಮುಖ ಧೋರಣೆಯೂ ದೇಶದಲ್ಲಿ ನ್ಯಾಯದ ಸಾವಿಗೆ ಕಾರಣವಾಗಲಿದೆ‘ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್ ವಾಗ್ದಾಳಿ ನಡೆಸಿದ್ದಾರೆ. 

‘ಗುರುವಾರ ಇಮ್ರಾನ್‌ ಖಾನ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಮುಖ್ಯನ್ಯಾಯಮೂರ್ತಿ ಅವರು ‘ನಿಮ್ಮನ್ನು ನೋಡಿ ಸಮಾಧಾನವಾಯಿತು’ ಎಂದಿದ್ದರು. ಇದನ್ನು ಅವರು ಭ್ರಷ್ಟಾಚಾರದ ಪ್ರಕರಣದಲ್ಲಿ ಹೇಳಿದ್ದರು’ ಎಂದು ಜಾಮೀನು ನೀಡಿದ ಕ್ರಮವನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು.

‘ಆಪ್ತನಿಗೆ ನೀವು ನೆರವು ನೀಡುವುದೇ ಆಗಿದ್ದರೆ ದೇಶದಲ್ಲಿ ಜೈಲಿನಲ್ಲಿರುವ ಎಲ್ಲ ಡಕಾಯಿತರನ್ನು ಬಿಡುಗಡೆ ಮಾಡಿ. ಎಲ್ಲರೂ ಮುಕ್ತವಾಗಿರಲಿ’ ಎಂದು ಸಂಪುಟ ಸಭೆಯಲ್ಲಿ ಮಾತನಾಡಿದ ಅವರು ಹೇಳಿದರು. 

ಇಮ್ರಾನ್‌ಖಾನ್ ಪ್ರಧಾನಿಯಾಗಿದ್ದಾಗ ಒಕ್ಕೂಟದ ಮೈತ್ರಿ ಸರ್ಕಾರದ ಅವಧಿಯಲ್ಲಿಯೇ ಬಂಧನವಾಗಿದ್ದ ನನ್ನ ಸಹೋದರ ನವಾಜ್‌ ಷರೀಫ್‌ ಮತ್ತು ಇತರರ ಬಗ್ಗೆ ಇಂಥ ಮೃಧುಧೋರಣೆ ತಳೆದಿರಲಿಲ್ಲ ಎಂದರು.

ಮೇ 17ರ ವರೆಗೂ ಬಂಧನ ಬೇಡ –ಹೈಕೋರ್ಟ್

ಇಸ್ಲಾಮಾಬಾದ್ (ಪಿಟಿಐ): ಇಮ್ರಾನ್ ಖಾನ್ ಅವರ ವಿರುದ್ಧ ಮೇ 9ರ ನಂತರ ದಾಖಲಿಸಲಾದ ಪ್ರಕರಣಗಳಿಗೆ ಸಂಬಂಧಿಸಿದ ಮೇ 17ರವರೆಗೂ ಬಂಧಿಸಬಾರದು ಎಂದು ಹೈಕೋರ್ಟ್‌ ಆದೇಶಿಸಿತು.

ಜಾಮೀನು ಮಂಜೂರು ಮಾಡಿದ ಹಿಂದೆಯೇ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯರ ನ್ಯಾಯಪೀಠವು ಈ ಸಂಬಂಧ ನಿರ್ದೇಶನ ನೀಡಿತು.

ತಮ್ಮ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳ ವಿವರ ನೀಡಬೇಕು ಹಾಗೂ ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ಜಾಮೀನು ನೀಡಬೇಕು ಎಂದು ಇಮ್ರಾನ್‌ ಖಾನ್‌ ಅವರು ಅರ್ಜಿ ಸಲ್ಲಿಸಿದ್ದರು. 

ಹಿಂಸಾಚಾರ: 3000 ಬಂಧನ

ಲಾಹೋರ್ (ಪಿಟಿಐ): ಇಮ್ರಾನ್‌ ಖಾನ್‌ ಬಂಧನ ಖಂಡಿಸಿ ಲಾಹೋರ್‌ನಲ್ಲಿ ನಡೆದ ಹಿಂಸಾಚಾರಗಳಿಗೆ ಸಂಬಂಧಿಸಿ 3000 ಜನರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ.

ಲಾಹೋರ್‌ನಲ್ಲಿಯೇ ಸುಮಾರು 80 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. 14 ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಟಿಐ ಪಕ್ಷದ ಮುಖಂಡ ಮುರಾದ್ ಸಯೀದ್‌ ವೀಡಿಯೊ ಸಂದೇಶ ನೀಡಿದ್ದು, ‘ಹಿಂಸಾಚಾರ ಕೃತ್ಯಗಳಲ್ಲಿ 40 ಕಾರ್ಯಕರ್ತರು  ಸತ್ತಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ‘ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.