ಸಾಂಕೇತಿಕ ಚಿತ್ರ
ಮೈದುಗುರಿ: ಶಂಕಿತ ಇಸ್ಲಾಮಿಕ್ ಬಂಡುಕೋರರು ನೈಜಿರಿಯಾದ ಈಶಾನ್ಯ ಭಾಗದಲ್ಲಿರುವ ಬೊರ್ನೊ ರಾಜ್ಯದ ಸೇನಾ ನೆಲೆಯೊಂದರ ಮೇಲೆ ದಾಳಿ ನಡೆಸಿ, ಕಮಾಂಡಿಂಗ್ ಅಧಿಕಾರಿ ಸೇರಿ ಕನಿಷ್ಠ 20 ಸೈನಿಕರನ್ನು ಕೊಂದು ಹಾಕಿದ್ದಾರೆ ಎಂದು ಭದ್ರತಾ ಮೂಲಗಳು ಹಾಗೂ ಸ್ಥಳೀಯರು ಭಾನುವಾರ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಬೊಕೊ ಹಾರಮ್ ಹಾಗೂ ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕಾ ಪ್ರಾವಿನ್ಸ್ (ಐಎಸ್‌ಡಬ್ಲ್ಯೂಎಪಿ) ಸಕ್ರಿಯವಾಗಿದ್ದು, ನಾಗರಿಕರು ಹಾಗೂ ಭದ್ರತಾ ಪಡೆಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿರುತ್ತವೆ. ಇದರಿಂದ ನೂರಾರು ಮಂದಿ ಸಾವಿಗೀಡಾಗಿ, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.
ಈ ಘಟನೆ ಶುಕ್ರವಾರ ನಡೆದಿದ್ದು, ಬಂದೂಕುಧಾರಿ ಐಎಸ್‌ಡಬ್ಲ್ಯೂಎಪಿ ಕಾರ್ಯಕರ್ತರು ಟ್ರಕ್‌ನಲ್ಲಿ ಬಂದು ನೈಗರ್‌ನ ಗಡಿ ಪ್ರದೇಶದಲ್ಲಿರುವ ಮಲಮ್–ಫಟೊರಿ ನಗರದಲ್ಲಿರುವ ಸೇನೆಯ 149ನೇ ಬೆಟಾಲಿಯನ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಇಬ್ಬರು ಸೈನಿಕರು ಹಾಗೂ ನಾಗರಿಕರು ತಿಳಿಸಿದ್ದಾರೆ.
‘ಬಂಡುಕೋರರಿಂದ ಇದು ಅನಿರೀಕ್ಷಿತ ದಾಳಿ. ಅವರು ಗುಂಡಿನ ಮಳೆಯನ್ನೆ ಸುರಿಸಿದರು’ ಎಂದು
ದಾಳಿಯಲ್ಲಿ ಬದುಕುಳಿದ ಸೈನಿಕರೊಬ್ಬರು ರಾಯಿಟರ್ಸ್‌ಗೆ ಫೋನ್ ಮೂಲಕ ತಿಳಿಸಿದ್ದಾರೆ.
‘ಅವರ ದಾಳಿಗೆ ನಾವೂ ಪ್ರತ್ಯುತ್ತರ ನೀಡಿದೆವು. ಮೂರು ಗಂಟೆಗಳ ಗುಂಡಿನ ಚಕಮಕಿ ಬಳಿಕ ಅವರು ಮೇಲುಗೈ ಸಾಧಿಸಿದರು. ದಾಳಿಯಲ್ಲಿ ಓಬ್ಬ ಕಮಾಂಡಿಗ್ ಅಧಿಕಾರಿ, ಓರ್ವ ಲೆಫ್ಟಿನೆಂಟ್ ಗವರ್ನರ್ ಸಾವಿಗೀಡಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ಅಧಿಕೃತ ವ್ಯಕ್ತಿ ಅಲ್ಲದಿದ್ದರಿಂದ ಹೆಸರು ಬಹಿರಂಗ ಪಡಿಸಲು ಅವರು ನಿರಾಕರಿಸಿದರು.
ಸುಮಾರು 20 ಸೈನಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ನೈಜಿರಿಯಾದ ವಕ್ತಾರರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.