ADVERTISEMENT

ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2025, 9:28 IST
Last Updated 2 ಜುಲೈ 2025, 9:28 IST
<div class="paragraphs"><p>ಡೊನಾಲ್ಡ್ ಟ್ರಂಪ್ ಮತ್ತು  ಬೆಂಜಮಿನ್ ನೆತನ್ಯಾಹು</p></div>

ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು

   

-ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಸ್ಥಳೀಯ ಸಮಯ) ಹೇಳಿದ್ದಾರೆ.

ADVERTISEMENT

ಕದನ ವಿರಾಮ ಒಪ್ಪಂದವನ್ನು ತಿರಸ್ಕರಿಸುವುದರ ವಿರುದ್ಧ ಟ್ರಂಪ್, ಹಮಾಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಹಾಗೇನಾದರೂ ಆದಲ್ಲಿ, ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆಯೇ ಹೊರತು ತಹಬದಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಶಾಂತಿ ಸ್ಥಾಪಿಸಲು ಬಹಳ ಶ್ರಮಿಸಿರುವ ಕತಾರ್ ಮತ್ತು ಈಜಿಫ್ಟ್ ಅಂತಿಮ ರೂಪುರೇಷೆ ನೀಡಲಿವೆ. ಪ್ರಸ್ತಾವಿತ ಕದನ ವಿರಾಮ ಅವಧಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.

‘ನನ್ನ ಪ್ರತಿನಿಧಿಗಳು ಗಾಜಾ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಇಸ್ರೇಲ್ ಜೊತೆ ದೀರ್ಘ ಮತ್ತು ಆಶಾದಾಯಕ ಮಾತುಕತೆ ನಡೆಸಿದರು. 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ. ಈ ಸಮಯದಲ್ಲಿ ನಾವು ಯುದ್ಧವನ್ನು ಕೊನೆಗೊಳಿಸಲು ಎಲ್ಲ ದೇಶಗಳೊಂದಿಗೆ ಪ್ರಯತ್ನ ಮಾಡುತ್ತೇವೆ. ಶಾಂತಿಯನ್ನು ತರಲು ಬಹಳ ಶ್ರಮಿಸಿದ ಕತಾರ್ ಮತ್ತು ಈಜಿಫ್ಟ್ ಅಂತಿಮ ಪ್ರಸ್ತಾಪವನ್ನು ನೀಡುತ್ತವೆ. ಪಶ್ಚಿಮ ಏಷ್ಯಾದ ಒಳಿತಿಗಾಗಿ, ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಇದು ಹೀಗೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ’ಎಂದಿದ್ದಾರೆ.

ಈ ನಡುವೆ ಗಾಜಾ ಮೇಲೆ ಇಸ್ರೇಲ್‌ನ ವಾಯುದಾಳಿ ಮುಂದುವರಿದಿದ್ದು, ಸೋಮವಾರ ಸುಮಾರು 50 ವೈಮಾನಿಕ ದಾಳಿ ಸಂಘಟಿಸಿದೆ. ಪೂರ್ವ ಗಾಜಾ ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಿದ್ದು, ನಿವಾಸಿಗಳು ನಗರ ತೊರೆಯುವಂತೆ ಎಚ್ಚರಿಕೆ ನೀಡಲಾಗಿತ್ತು.

ಇಸ್ರೇಲ್ ಪಡೆಗಳು ಭಾನುವಾರ ಗಾಜಾದಲ್ಲಿ ಕನಿಷ್ಠ 68 ಪ್ಯಾಲೆಸ್ಟೀನಿಯನ್ನರನ್ನು ಕೊಂದಿವೆ ಎಂದು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.

ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಯುದ್ಧದಲ್ಲಿ ಈವರೆಗೆ ಕನಿಷ್ಠ 56,500 ಜನ ಮೃತಪಟ್ಟಿದ್ದು, 33,419 ಜನ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.