ADVERTISEMENT

ಕದನ ವಿರಾಮದ ನಡುವೆಯೇ ಗಾಜಾದಲ್ಲಿ ಇಸ್ರೇಲ್‌ ದಾಳಿ

ಏಜೆನ್ಸೀಸ್
Published 19 ಅಕ್ಟೋಬರ್ 2025, 15:57 IST
Last Updated 19 ಅಕ್ಟೋಬರ್ 2025, 15:57 IST
   

ಟೆಲ್‌ ಅವೀವ್: ಕದನ ವಿರಾಮದ ನಡುವೆಯೇ ಇಸ್ರೇಲ್‌ ಸೇನೆ ಭಾನುವಾರ ಹಮಾಸ್‌ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾಪಟ್ಟಿಯ ಹಲವೆಡೆ ವೈಮಾನಿಕ ದಾಳಿ ನಡೆಸಿದೆ.  

ಸೇನೆಯ ನಿಯಂತ್ರಣದಲ್ಲಿರುವ ಗಾಜಾದಲ್ಲಿ ಹಮಾಸ್‌ ಬಂಡುಕೋರರು ಇಸ್ರೇಲ್‌ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ, ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ. ಆದರೆ, ಗಾಜಾಪಟ್ಟಿಯ ದಕ್ಷಿಣ ಭಾಗದ ರಫಾದಲ್ಲಿ ಯಾವುದೇ ಘರ್ಷಣೆಯಲ್ಲಿ  ಭಾಗಿಯಾಗಿಲ್ಲ ಎಂದು ಹಮಾಸ್‌ ಹೇಳಿದೆ. 

‘ಹಮಾಸ್‌ನಿಂದ ಕದನ ವಿರಾಮ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಿ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ ಸೇನಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆದರೆ, ಮತ್ತೊಮ್ಮೆ ಯುದ್ಧ ಪುನರಾರಂಭಿಸುವ ಬೆದರಿಕೆ ಒಡ್ಡಿಲ್ಲ. ಇದರ ಬೆನ್ನಲ್ಲೇ, ಕದನ ವಿರಾಮಕ್ಕೆ ಸಂಬಂಧಿಸಿದ ಎರಡನೆಯ ಸುತ್ತಿನ ಮಾತುಕತೆ ಆರಂಭಗೊಂಡಿದೆ ಎಂದು ಪ್ಯಾಲೆಸ್ಟೀನ್‌ ಹೇಳಿದೆ. ಹಮಾಸ್‌ನ ಸಂಪೂರ್ಣ ನಿಶ್ಶಸ್ತ್ರೀಕರಣ, ಗಾಜಾದ ಭವಿಷ್ಯದ ಆಡಳಿತ ಎರಡನೆಯ ಸುತ್ತಿನ ಕದನ ವಿರಾಮ ಮಾತುಕತೆಯ ಪ್ರಮುಖ ಅಂಶಗಳು.   

ADVERTISEMENT

ಬಾಕಿ ಉಳಿದಿದ್ದ ಇಬ್ಬರು ಇಸ್ರೇಲ್‌ ಒತ್ತೆಯಾಳುಗಳನ್ನು ಹಮಾಸ್‌ ಶನಿವಾರ ರಾತ್ರೋರಾತ್ರಿ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ, ಇಸ್ರೇಲ್‌ ಸೇನೆಯಿಂದ ದಾಳಿ ನಡೆದಿದೆ. ಹಮಾಸ್‌ ಕದನ ವಿರಾಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವರೆಗೆ ಗಾಜಾ–ಈಜಿಪ್ಟ್ ನಡುವಿನ ರಫಾ ಗಡಿಯನ್ನು ಮುಚ್ಚುವುದಾಗಿ ಇಸ್ರೇಲ್‌ ಎಚ್ಚರಿಸಿದೆ. 

ಮೃತದೇಹ ಹಸ್ತಾಂತರ

ಕದನ ವಿರಾಮ ಘೋಷಣೆಯಾದ ನಂತರ, ಕಳೆದ ಒಂದು ವಾರದಲ್ಲಿ ಹಮಾಸ್‌ ಇಸ್ರೇಲ್‌ಗೆ 13 ಮೃತದೇಹಗಳನ್ನು ಹಸ್ತಾಂತರಿಸಿದೆ. ಇದರಲ್ಲಿ 12 ಮೃತದೇಹಗಳು ಒತ್ತೆಯಾಳುಗಳದ್ದು ಎಂದು ಇಸ್ರೇಲ್ ಸೇನೆ ಗುರುತಿಸಿದೆ. ಇಸ್ರೇಲ್‌, ಹಮಾಸ್‌ಗೆ 150 ಪ್ಯಾಲೆಸ್ಟೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.