ಇರಾನ್‌ನ ಟೆಹ್ರಾನ್ ನಗರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ
(ರಾಯಿಟರ್ಸ್ ಚಿತ್ರ)
ಟೆಹ್ರಾನ್/ಜೆರುಸಲೇಂ: ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಇಸ್ರೇಲ್ ಸೇನೆ ತಿಳಿಸಿದ್ದು, ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ.
ಇರಾನ್ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಹತರಾಗಿರುವ ಸಾಧ್ಯತೆಯಿದೆ ಎಂದೂ ಸಹ ಇಸ್ರೇಲ್ ಸೇನೆ ಹೇಳಿದೆ.
ಇರಾನ್ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಟೆಹ್ರಾನ್ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ.
ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಮಗದೊಂದು ಮೂಲದ ಪ್ರಕಾರ, ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ ಹತ್ಯೆಗೀಡಾಗಿದ್ದಾನೆ ಎಂದು ವರದಿಯಾಗಿದೆ.
ಭಾರತೀಯರಿಗೆ ಎಚ್ಚರಿಕೆ...
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಹಾಗೂ ಇರಾಕ್‌ನಲ್ಲಿ ಇರುವ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆಯನ್ನು ನೀಡಿದೆ.
ಇರಾನ್ ಹಾಗೂ ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪ್ರಜೆಗಳು ಜಾಗರೂಕರಾಗಿ ಇರಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಸದಾ ಭಾರತೀಯ ರಾಯಭಾರ ಕಚೇರಿಯ ಜೊತೆ ಸಂಪರ್ಕದಲ್ಲಿರುವಂತೆಯೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.