ADVERTISEMENT

Iran-Israel Conflict | ಖಮೇನಿ ಕೊಲ್ಲುವೆವು: ಇಸ್ರೇಲ್‌ ಗುಡುಗು

ಆಸ್ಪತ್ರೆ ಮೇಲೆ ದಾಳಿ ನಡೆಸಿದ ಇರಾನ್‌ಗೆ ಎಚ್ಚರಿಕೆ ನೀಡಿದ ನೆತನ್ಯಾಹು ಸರ್ಕಾರ

ಏಜೆನ್ಸೀಸ್
Published 19 ಜೂನ್ 2025, 23:30 IST
Last Updated 19 ಜೂನ್ 2025, 23:30 IST
<div class="paragraphs"><p>ಇರಾನ್‌ನಿಂದ ದೆಹಲಿಗೆ ಬಂದಿಳಿದಿ ಭಾರತೀಯ ವಿದ್ಯಾರ್ಥಿಗಳನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್‌ ಗುರುವಾರ ಬರಮಾಡಿಕೊಂಡರು </p></div>

ಇರಾನ್‌ನಿಂದ ದೆಹಲಿಗೆ ಬಂದಿಳಿದಿ ಭಾರತೀಯ ವಿದ್ಯಾರ್ಥಿಗಳನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್‌ ಗುರುವಾರ ಬರಮಾಡಿಕೊಂಡರು

   

  ಪಿಟಿಐ ಚಿತ್ರ 

ಬೀರ್ಶೇಬಾ(ಇಸ್ರೇಲ್‌): ಇರಾನ್‌ ನಡೆಸಿದ ಕ್ಷಿಪಣಿಗಳ ದಾಳಿಯಲ್ಲಿ ಇಸ್ರೇಲ್‌ನ ದಕ್ಷಿಣದಲ್ಲಿರುವ ಬೀರ್ಶೇಬಾ ನಗರದ ಪ್ರಮುಖ ಆಸ್ಪತ್ರೆಯೊಂದು ಹಾನಿಗೀಡಾಗಿದೆ. ಇದರ ಬೆನ್ನಲ್ಲೇ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ವಿರುದ್ಧ ಇಸ್ರೇಲ್‌ ಗುಡುಗಿದೆ.

ADVERTISEMENT

‘ಇಸ್ರೇಲ್ ತನ್ನೆಲ್ಲಾ ಗುರಿಗಳನ್ನು ಸಾಧಿಸಬೇಕಾದರೆ, ಈ ವ್ಯಕ್ತಿ (ಖಮೇನಿ) ಬದುಕಿರಬಾರದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಮ್ಮ ಸೇನೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್‌ ಕ್ಯಾಟ್ಜ್‌ ಗುರುವಾರ ಹೇಳಿದ್ದಾರೆ.

‘ಆಸ್ಪತ್ರೆಗಳ ಮೇಲೆ ದಾಳಿ ನಡೆಸುವಂತೆ ಸ್ವತಃ ಖಮೇನಿ ಆದೇಶಿಸುತ್ತಿದ್ದು, ಇಂತಹ ವ್ಯಕ್ತಿ ಜೀವಂತವಾಗಿ ಇರಲು ಅವಕಾಶ ನೀಡಬಾರದು’ ಎಂದೂ ಕ್ಯಾಟ್ಜ್ ಕಿಡಿಕಾರಿದ್ದಾರೆ.

ನಗರದ ಸೊರೊಕೊ ಮೆಡಿಕಲ್‌ ಸೆಂಟರ್‌ ಗುರಿಯಾಗಿಸಿ ಇರಾನ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 200 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯ ನಡೆಸುವ ಸಂಸ್ಥೆ ಮ್ಯಾಗನ್ ಡೇವಿಡ್ ಆ್ಯಡಮ್ ಹೇಳಿದೆ.

‘ಸೈರನ್‌ ಮೊಳಗಿದ ಕೆಲ ಹೊತ್ತಿನಲ್ಲಿಯೇ ಕ್ಷಿಪಣಿಗಳು ಆಸ್ಪತ್ರೆ ಕಟ್ಟಡಕ್ಕೆ ಅಪ್ಪಳಿಸಿದವು. ಭಾರಿ ಶಬ್ದ ಕೇಳಿಬಂತು’ ಎಂದು ಆಸ್ಪತ್ರೆಯ ಇಬ್ಬರು ವೈದ್ಯರು ಹೇಳಿದ್ದಾರೆ.

‘ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಕಟ್ಟಡಕ್ಕೆ ಹಾನಿಯಾಗಿದೆ. ಇತ್ತೀಚೆಗಷ್ಟೆ ಈ ಕಟ್ಟಡದಿಂದ ಜನರನ್ನು ತೆರವು ಮಾಡಲಾಗಿತ್ತು. ಹೀಗಾಗಿ ಪ್ರಾಣಹಾನಿ ಆಗಿಲ್ಲ. ಸದ್ಯ, ಜೀವಕ್ಕೆ ಅಪಾಯ ಇರುವ ರೋಗಿಗಳನ್ನು ಹೊರತುಪಡಿಸಿ ಉಳಿದ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ’ ಎಂದು ಸೊರೊಕೊ ಆಸ್ಪತ್ರೆ ಹೇಳಿದೆ.

ಆಸ್ಪತ್ರೆ ಮೇಲಿನ ದಾಳಿಗೆ ಸಂಬಂಧಿಸಿ ಇರಾನ್‌ನ ಸರ್ವಾಧಿಕಾರಿಗಳು ಭಾರಿ ಬೆಲೆ ತೆರುವಂತೆ ಮಾಡುವುದು ಖಚಿತ
ಬೆಂಜಮಿನ್‌ ನೆತನ್ಯಾಹು ಇಸ್ರೇಲ್‌ ಪ್ರಧಾನಿ
ಇಸ್ರೇಲ್– ಇರಾನ್‌ ಬಿಕ್ಕಟ್ಟು ಕೊನೆಗಾಣಿಸಲು ಹಾಗೂ ಇರಾನ್‌ ಶಾಂತಿಯುತ ಅಣುಶಕ್ತಿ ಕಾರ್ಯಕ್ರಮ ಮುಂದುವರಿಸುವುದಕ್ಕಾಗಿ ಮಧ್ಯಸ್ಥಿಕೆ ವಹಿಸಲು ರಷ್ಯಾ ಸಿದ್ಧ
ವ್ಲಾದಿಮಿರ್ ಪುಟಿನ್ ರಷ್ಯಾ ಅಧ್ಯಕ್ಷ
‘ಹಿಜ್ಬುಲ್ಲಾ ಮಧ್ಯಪ್ರವೇಶ ಬೇಡ’
ಬೈರೂತ್(ಲೆಬನಾನ್)(ರಾಯಿಟರ್ಸ್): ಇರಾನ್‌ ಬೆಂಬಲಿತ ಸಶಸ್ತ್ರ ಗುಂಪು ಹಿಜ್ಬುಲ್ಲಾ ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದಲ್ಲಿ ಮಧ್ಯಪ್ರವೇಶಿಸಬಾರದು. ಹಾಗೆ ಮಾಡಿದಲ್ಲಿ ಅದು ಅತ್ಯಂತ ಕೆಟ್ಟ ನಿರ್ಧಾರವಾಗಲಿದೆ ಎಂದು ಅಮೆರಿಕ ಹೇಳಿದೆ. ಇಲ್ಲಿಗೆ ಭೇಟಿ ನೀಡಿರುವ ಸಿರಿಯಾ ಕುರಿತ ಅಮೆರಿಕದ ವಿಶೇಷ ರಾಯಭಾರಿ ಥಾಮಸ್‌ ಬರಾಕ್ ‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಇದೇ ಮಾತನ್ನು ಹೇಳಿದ್ದಾರೆ’ ಎಂದಿದ್ದಾರೆ.
ಹೊರ್ಮುಜ್‌ ಜಲಸಂಧಿ ಬಂದ್ ಎಚ್ಚರಿಕೆ
‘ದೇಶದ ಸಮಗ್ರತೆ ನಾಗರಿಕರ ರಕ್ಷಣೆಗಾಗಿ ಹಾಗೂ ತನ್ನ ಮೇಲಿನ ದಾಳಿಗೆ ಪ್ರತ್ಯುತ್ತರ ನೀಡುವುದಕ್ಕಾಗಿ ತನ್ನ ಮುಂದೆ ಎಲ್ಲ ಆಯ್ಕೆಗಳು ಇವೆ’ ಎಂದು ಇರಾನ್‌ ಹೇಳಿದೆ. ‘ತನ್ನ ಮೇಲಿನ ಆಕ್ರಮಣಕ್ಕೆ ಪ್ರತ್ಯುತ್ತರ ನೀಡುವ ಭಾಗವಾಗಿ ಹೊರ್ಮುಜ್‌ ಜಲಸಂಧಿಯನ್ನು ಮುಚ್ಚುವುದು ಸೇರಿದಂತೆ ಹಲವು ಆಯ್ಕೆಗಳು ನಮ್ಮ ಮುಂದಿವೆ’ ಎಂದು ಭದ್ರತೆ ಕುರಿತ ಸಂಸದೀಯ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ‘ರಕ್ಷಣೆಗೆ ಸಂಬಂಧಿಸಿ ನಮ್ಮ ಸೇನಾಧಿಕಾರಿಗಳು ಎಲ್ಲ ರೀತಿಯ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದ್ದಾರೆ’ ಎಂದು ಇರಾನ್‌ನ ಡೆಪ್ಯುಟಿ ವಿದೇಶಾಂಗ ಸಚಿವ ಕಜೀಂ ಘರಿಬಾಬಾದಿ ಹೇಳಿದ್ದಾರೆ.
ಚೆರ್ನೋಬಿಲ್ ರೀತಿಯ ದುರಂತ: ರಷ್ಯಾ ಎಚ್ಚರಿಕೆ
ಸೇಂಟ್‌ ಪೀಟರ್ಸ್‌ಬರ್ಗ್: ಇರಾನ್‌ನ ಬುಶೆಹ್ರ್ ಅಣು ಸ್ಥಾವರದ ಮೇಲೆ ಇಸ್ರೇಲ್‌ ದಾಳಿ ನಡೆಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಷ್ಯಾ ಇಂತಹ ಕ್ರಮ ಚೆರ್ನೋಬಿಲ್‌ ರೀತಿಯ ದುರಂತಕ್ಕೆ ಕಾರಣವಾಗಲಿದೆ ಎಂದು ಗುರುವಾರ ಎಚ್ಚರಿಸಿದೆ. ಇರಾನ್‌ ಮೇಲಿನ ದಾಳಿಯನ್ನು ನಿಲ್ಲಿಸುವಂತೆಯೂ ಆಗ್ರಹಿಸಿದೆ. ಬುಶೆಹ್ರ್‌ನಲ್ಲಿನ ಈ ಸೌಲಭ್ಯವು ಸದ್ಯ ಇರಾನ್‌ನಲ್ಲಿ ಸಕ್ರಿಯವಾಗಿರುವ ಏಕೈಕ ಅಣುಸ್ಥಾವರವಾಗಿದೆ. ಇದನ್ನು ರಷ್ಯಾ ನಿರ್ಮಿಸುತ್ತಿದೆ. ‘ಬುಶೆಹ್ರ್ ಅಣುಸ್ಥಾವರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಷ್ಯಾ ತಂತ್ರಜ್ಞರ ಸುರಕ್ಷತೆ ಕುರಿತು ಆತಂಕ ಮೂಡಿದೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ವಕ್ತಾರೆ ಮಾರಿಯಾ ಝಖರೋವಾ ಹೇಳಿದ್ದಾರೆ.

ಪ್ರಮುಖ ಬೆಳವಣಿಗೆಗಳು

* ಇರಾನ್‌ ನೂರಾರು ಕ್ಷಿಪಣಿಗಳು ಹಾಗೂ ಡ್ರೋನ್‌ಗಳಿಂದ ದಾಳಿ ನಡೆಸಿದೆ. ಬಹುತೇಕ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಇಸ್ರೇಲ್‌ ಹೊಡೆದುರಳಿಸಿದೆ

* ಟೆಲ್‌ ಅವೀವ್‌ ಸಮೀಪದ ವಸತಿ ಪ್ರದೇಶದ ಮೇಲೆ ಇರಾನ್‌ ದಾಳಿ ನಡೆಸಿದ್ದು ಹಲವಾರು ಗಗನಚುಂಬಿ ಕಟ್ಟಡಗಳು ಅಪಾರ್ಟ್‌ಮೆಂಟ್‌ಗಳಿಗೆ ಹಾನಿಯಾಗಿದೆ

* ಇರಾನ್‌ನ ಅರಾಕ್‌ ಅಣು ಸ್ಥಾವರ ಗುರಿಯಾಗಿಸಿ ಇಸ್ರೇಲ್‌ ಯುದ್ಧವಿಮಾನಗಳು ದಾಳಿ ನಡೆಸಿವೆ. ವಿಕಿರಣ ಸೋರಿಕೆ ಅಪಾಯ ಕಂಡುಬಂದಿಲ್ಲ ಎಂಬ ತಜ್ಞರ ಹೇಳಿಕೆ ಉಲ್ಲೇಖಿಸಿ ಇರಾನ್‌ ಸುದ್ದಿವಾಹಿನಿ ವರದಿ ಮಾಡಿದೆ

* ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಜಿ ಶುಕ್ರವಾರ ಜಿನೀವಾಕ್ಕೆ ಭೇಟಿ ನೀಡಲಿದ್ದು ಬ್ರಿಟನ್ ಫ್ರಾನ್ಸ್ ಜರ್ಮನಿ ಹಾಗೂ ಐರೋಪ್ಯ ಒಕ್ಕೂಟದ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ

* ಇರಾನ್‌ನ ಧಾರ್ಮಿಕ ತಾಣಗಳು ಮತ್ತು ರಾಜಕೀಯ ಮುಖಂಡರ ಮೇಲೆ ದಾಳಿ ನಡೆಸಿದರೆ ಅದು ಮಧ್ಯಪ್ರಾಚ್ಯದಲ್ಲಿ ಭೀಕರ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಇರಾಕ್‌ನ ಪ್ರಮುಖ ಧಾರ್ಮಿಕ ಮುಖಂಡ ಆಯತೊಲ್ಲಾ ಅಲಿ ಸಿಸ್ತಾನಿ ಎಚ್ಚರಿಸಿದ್ದಾರೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.