ADVERTISEMENT

ಸೇನಾ ನೆಲೆ ಮೇಲೆ ದಾಳಿ ಪ್ರಕರಣ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಜಾಮೀನು

ಪಿಟಿಐ
Published 10 ಫೆಬ್ರುವರಿ 2024, 8:32 IST
Last Updated 10 ಫೆಬ್ರುವರಿ 2024, 8:32 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಹಾಗೂ ವಸ್ತು ಸಂಗ್ರಹಾಲಯದ ಮೇಲೆ ಮೇ 9ರಂದು ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ 12 ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು (ಎಟಿಸಿ) ಶನಿವಾರ ಜಾಮೀನು ಮಂಜೂರು ಮಾಡಿದೆ.

‘ಸೇನಾ ನೆಲೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಪ್ರಕರಣದ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಇದ್ದಾರೆ. ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಯಾವುದೇ ಸಮರ್ಥನೆ ಇಲ್ಲ. 12 ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 1 ಲಕ್ಷ ಮೊತ್ತದ ಭದ್ರತಾ ಠೇವಣಿ ಇರಿಸಿದ ನಂತರ ಖಾನ್‌ ಜಾಮೀನು ಪಡೆಯಬಹುದು’ ಎಂದು ಎಟಿಸಿ ನ್ಯಾಯಾಧೀಶ ಮಲಿಕ್ ಎಜಾಜ್ ಆಸೀಫ್‌ ತೀರ್ಪಿನಲ್ಲಿ ತಿಳಿಸಿದ್ದಾರೆ.

ಇಮ್ರಾನ್‌ ಖಾನ್‌ ಅವರು ಬೇರೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವುದರಿಂದ, ಜಾಮೀನು ದೊರೆತರೂ ಜೈಲಿನಲ್ಲಿಯೇ ಇರಬೇಕಿದೆ.

ADVERTISEMENT

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಖಾನ್ ನೇತೃತ್ವದ ಪಕ್ಷದ ಸದಸ್ಯರು, 100 ಸ್ಥಾನಗಳ ಆಸುಪಾಸಿನಲ್ಲಿ ಗೆಲುವು ಸಾಧಿಸಿದ ಮರು ದಿನ ಈ ತೀರ್ಪು ಪ್ರಕಟಗೊಂಡಿದೆ.

ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರಿಗೂ ಸಹ ಜಾಮೀನು ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.