ADVERTISEMENT

ಕೋವಿಡ್‌ ಲಸಿಕೆಗೆ ಸಹಕಾರ: ಅಮೆರಿಕ ಸಂಸದರೊಂದಿಗೆ ಜೈಶಂಕರ್‌ ಮಾತುಕತೆ

ಪಿಟಿಐ
Published 28 ಮೇ 2021, 1:30 IST
Last Updated 28 ಮೇ 2021, 1:30 IST
ಎಸ್.ಜೈಶಂಕರ್‌
ಎಸ್.ಜೈಶಂಕರ್‌    

ವಾಷಿಂಗ್ಟನ್‌: ಅಮೆರಿಕದ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಪ್ರಭಾವಿ ಸಂಸದರೊಂದಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಗುರುವಾರ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ ದೇಶಗಳನ್ನೊಳಗೊಂಡ ‘ಕ್ವಾಡ್’ ರಾಷ್ಟ್ರಗಳಿಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ಕೋವಿಡ್‌ ಲಸಿಕೆಗಳ ಕುರಿತಾದ ಸಹಕಾರದ ಬಗ್ಗೆ ಚರ್ಚೆ ನಡೆಸಲಾಗಿದೆ.

ರಿಪಬ್ಲಿಕನ್ ಕಾಂಗ್ರೆಸ್ಸಿಗ ಮೈಕೆಲ್ ಮೆಕಾಲ್‌ ಮತ್ತು ಗೃಹ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಗ್ರೆಗೊರಿ ಮೀಕ್ಸ್ ಅವರ ಭೇಟಿ ಬಳಿಕ ಮಾತನಾಡಿದ ಜೈಶಂಕರ್, ‘ಕ್ವಾಡ್‌ಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ಕೋವಿಡ್‌ ಲಸಿಕೆಗಳ ಬಗ್ಗೆ ಸಹಕಾರ ನೀಡುವ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಡೆಮಾಕ್ರಟಿಕ್ ಪಕ್ಷದ ಸಂಸದ ಬ್ರಾಡ್ ಶೆರ್ಮನ್ ಮತ್ತು ರಿಪಬ್ಲಿಕನ್ ಪಕ್ಷದ ಸಂಸದ ಸ್ಟೀವ್‌ ಚಬೊಟ್‌ ಅವರೊಂದಿಗೂ ಜೈಶಂಕರ್‌ ಮಾತುಕತೆ ನಡೆಸಿದ್ದಾರೆ.

‘ಭಾರತವು ಕೋವಿಡ್‌ ಸವಾಲನ್ನು ಎದುರಿಸುತ್ತಿರುವ ಕಾರಣಕ್ಕೆ ಯುಎಸ್‌ ಕಾಂಗ್ರೆಸ್‌ನ ಬೆಂಬಲ ಹೆಚ್ಚು ಪ್ರಾಮುಖ್ಯತೆ ಪಡೆದಿದೆ’ ಎಂದು ಜೈಶಂಕರ್ ಟ್ವೀಟ್‌ ಮಾಡಿದ್ದಾರೆ.

‘ಭಾರತ ಕೋವಿಡ್‌ ವಿರುದ್ಧ ಹೇಗೆ ಹೋರಾಡುತ್ತಿದೆ ಮತ್ತು ಚೀನಾದಿಂದ ತನ್ನ ಆರ್ಥಿಕತೆಯನ್ನು ಬೇರ್ಪಡಿಸಲು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಬ್ರಾಡ್ ಶೆರ್ಮನ್ ಹೇಳಿದ್ದಾರೆ.

ಭಾರತ ಕೋವಿಡ್‌ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಅಮೆರಿಕ ಈಗಾಗಲೇ ಅಗತ್ಯ ವೈದ್ಯಕೀಯ ಪರಿಕರಗಳ ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.