ADVERTISEMENT

ಶ್ರೀಲಂಕಾ: ವೈದ್ಯಕೀಯ ಸೌಲಭ್ಯದಲ್ಲಿ ವ್ಯತ್ಯಯ, ನೆರವಿಗೆ ಜೈಶಂಕರ್‌ ಸೂಚನೆ

ಪಿಟಿಐ
Published 29 ಮಾರ್ಚ್ 2022, 11:00 IST
Last Updated 29 ಮಾರ್ಚ್ 2022, 11:00 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ಕೊಲಂಬೊ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗಿದ್ದು ಆಸ್ಪತ್ರೆಗಳು ಸೇವೆಯನ್ನು ಸ್ಥಗಿತಗೊಳಿಸಿವೆ. ಆಸ್ಪತ್ರೆಗಳಿಗೆ ನೆರವು ನೀಡುವಂತೆ ಇಲ್ಲಿನ ಭಾರತದ ಹೈ ಕಮಿಷನರ್‌ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಂಗಳವಾರ ಸೂಚಿಸಿದ್ದಾರೆ.

ಔಷಧಿಯ ಕೊರತೆಯಿಂದಾಗಿ ಎಲ್ಲಾ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿಕ್ಯಾಂಡಿಯ ಕೇಂದ್ರ ಜಿಲ್ಲೆಯ ಪೆರಾಡೆನಿಯಾ ಆಸ್ಪತ್ರೆಯ ನಿರ್ದೇಶಕರು ಸೋಮವಾರ ಪ್ರಕಟಿಸಿದ್ದರು.

ದ್ವೀಪ ರಾಷ್ಟ್ರಕ್ಕೆ ಭಾರತ ಯಾವ ರೀತಿಯ ಆರೋಗ್ಯ ಸೌಲಭ್ಯದ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸುವಂತೆ ಜೈಶಂಕರ್‌ ಅವರು ಕೊಲಂಬೊದಲ್ಲಿನ ಭಾರತದ ಹೈ ಕಮಿಷನರ್‌ ಗೋಪಾಲ್‌ ಬಾಗ್ಲೆ ಅವರಿಗೆ ತಿಳಿಸಿದ್ದಾರೆ.

ADVERTISEMENT

‘ಆರೋಗ್ಯ ಸೇವೆಯ ವ್ಯತ್ಯಯದ ಸುದ್ದಿ ನೋಡಿ ಬೇಸರವಾಗಿದೆ. ಅಲ್ಲಿಯ ಅಧಿಕಾರಿಗಳನ್ನು ಸಂಪರ್ಕಿಸಿ ಭಾರತದ ನೆರವು ನೀಡುವ ಬಗ್ಗೆ ಚರ್ಚೆ ನಡೆಸುವಂತೆ ಹೈ ಕಮಿಷನರ್‌ ಬಾಗ್ಲೆ ಅವರಿಗೆ ಸೂಚಿಸಿದ್ದೇನೆ’ ಎಂದು ಜೈಶಂಕರ್‌ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಆಸ್ಪತ್ರೆಯಲ್ಲಿ ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆಗೆ ಬಳಸುವ ಹಲವಾರು ಔಷಧಗಳು ಮತ್ತು ಇತರ ಸಲಕರಣೆಗಳ ಕೊರತೆಯಿದೆ.ಈಗಾಗಲೇ ದಾಖಲಾಗಿರುವ ರೋಗಿಗಳಿಗೆ ಸೇರಿದಂತೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಪೆರಾಡೆನಿಯಾ ಆಸ್ಪತ್ರೆಯು ಹೊರಡಿಸಿದ ಸುತ್ತೋಲೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.