
(ಚಿತ್ರ ಕೃಪೆ–X/ @taslimanasreen)
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಗುಂಪು ದಾಳಿಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹೀಗಾಗಿ ಜನಪ್ರಿಯ ರಾಕ್ ಗಾಯಕ ಜೇಮ್ಸ್ ಅವರ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫರೀದ್‌ಪುರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಶಾಲೆಯೊಂದರ 185ನೇ ವಾರ್ಷಿಕೋತ್ಸವ ಸಮಾರಂಭ ಹಿನ್ನೆಲೆ ಜೇಮ್ಸ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆದರೆ, ಕಾರ್ಯಕ್ರಮ ಆರಂಭವಾಗುವ ಮುನ್ನ, ವೇದಿಕೆಯತ್ತ ನುಗ್ಗಲು ಗುಂಪೊಂದು ಪ್ರಯತ್ನಿಸಿತು. ಅಲ್ಲದೇ ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಎಸೆದು ವೇದಿಕೆಗೆ ಮುತ್ತಿಗೆ ಹಾಕಲು ಯತ್ನಿಸಿತು. ಶಾಲೆಯ ವಿದ್ಯಾರ್ಥಿಗಳು ದಾಳಿಕೋರರನ್ನು ತಡೆಯಲು ಯತ್ನಿಸಿದ್ದು, ಈ ವೇಳೆ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಾವುನೋವುಗಳ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸದರ್ ವೃತ್ತ) ಅಜ್ಮೀರ್ ಹೊಸೈನ್ ಹೇಳಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ, ಫರೀದ್‌ಪುರ ಜಿಲ್ಲಾಡಳಿತದ ಆದೇಶದ ಮೇರೆಗೆ ಆಯೋಜನಾ ಸಮಿತಿಯ ಸಂಚಾಲಕ ಮುಸ್ತಾಫಿಜುರ್ ರೆಹಮಾನ್ ಶಮೀಮ್ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
ದಾಳಿಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ ಎಂದು ಕಾರ್ಯಕ್ರಮದ ಪ್ರಚಾರ ಮತ್ತು ಮಾಧ್ಯಮ ಉಪ ಸಮಿತಿಯ ಸಂಚಾಲಕ ರಾಜಿಬುಲ್ ಹಸನ್ ಖಾನ್ ಹೇಳಿದ್ದಾರೆ.
ಯಾರು, ಯಾಕಾಗಿ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಜಿಲ್ಲಾಡಳಿತದ ಸೂಚನೆ ಮೇರೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಎಂದೂ ಅವರು ಹೇಳಿದ್ದಾರೆ.
ಪ್ರಸಿದ್ಧ ಹಿನ್ನೆಲೆ ಗಾಯಕ, ಗಿಟಾರ್ ವಾದಕ ಮತ್ತು ಗೀತ ರಚನೆಕಾರರಾಗಿರುವ ಜೇಮ್ಸ್ ಅವರು, ಹಲವಾರು ಹಿಂದಿ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ.
ಲೇಖಕಿ ತಸ್ಲಿಮಾ ನಸ್ರೀನ್ ಅವರು, ದೇಶದಲ್ಲಿ ಗಾಯಕರು ಮತ್ತು ಕಲಾವಿದರ ಮೇಲಿನ ದಾಳಿಗಳನ್ನು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾಂಸ್ಕೃತಿಕ ಕೇಂದ್ರ ಛಾಯಾನೌತ್ ಸುಟ್ಟು ಭಸ್ಮವಾಗಿದೆ. ಸಂಗೀತ, ರಂಗಭೂಮಿ, ನೃತ್ಯ, ಪಠಣ ಮತ್ತು ಜಾನಪದ ಸಂಸ್ಕೃತಿಯ ಪ್ರಚಾರದ ಮೂಲಕ ಜಾತ್ಯತೀತ ಮತ್ತು ಪ್ರಗತಿಪರ ಪ್ರಜ್ಞೆಯನ್ನು ಬೆಳೆಸಲು ನಿರ್ಮಿಸಲಾದ ಉಡಿಚಿ ಸಂಸ್ಥೆಯನ್ನು ಸಹ ಸುಟ್ಟು ಭಸ್ಮ ಮಾಡಲಾಗಿದೆ. ಈಗ ಜಿಹಾದಿಗಳು ಪ್ರಸಿದ್ಧ ಗಾಯಕ ಜೇಮ್ಸ್‌ಗೆ ಕಾರ್ಯಕ್ರಮವೊಂದರಲ್ಲಿ ಹಾಡಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.