ADVERTISEMENT

ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಪ್ರಚಾರಕ್ಕೆ ಬಳಸಿದ್ದ ವಿಮಾನದಲ್ಲಿ ವಲಸಿಗರ ಗಡೀಪಾರು

ಏಜೆನ್ಸೀಸ್
Published 30 ಮೇ 2025, 4:36 IST
Last Updated 30 ಮೇ 2025, 4:36 IST
<div class="paragraphs"><p>ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್</p></div>

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್

   

- ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಚುನಾವಣೆ ಪ್ರಚಾರಕ್ಕೆ ಬಳಸುತ್ತಿದ್ದ ವಿಮಾನವನ್ನು ಈಗ ವಲಸಿಗರನ್ನು ಗಡೀಪಾರು ಮಾಡಲು ಉಪಯೋಗಿಸಲಾಗುತ್ತಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ADVERTISEMENT

ಕೆಂಪು, ಬಿಳಿ ಮತ್ತು ನೀಲಿ ಬಣ್ಣ ಹೊಂದಿದ್ದ ಈ ವಿಮಾನವು ಚುನಾವಣೆಯ ಪ್ರಚಾರದ ವೇಳೆ ಸಾವಿರಾರು ಮೈಲಿ ಹಾರಾಟ ನಡೆಸಿತ್ತು. ಇದೀಗ ಟ್ರಂಪ್ ಆಡಳಿತದ ನಿಯಮವನ್ನು ಜಾರಿಗೊಳಿಸಲು ಈ ಉಪಾಧ್ಯಕ್ಷರು ಬಳಸಿದ ವಿಮಾನವನ್ನು ಉಪಯೋಗಿಸಲಾಗುತ್ತಿದೆ.

ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡುವಂತೆಯೂ ಅಭಿಯಾನ ನಡೆಸಿದ್ದ ಈ ವಿಮಾನ ಈಗ ವಿಭಿನ್ನ ಮತ್ತು ರಹಸ್ಯವಾದ ಕೆಲಸವನ್ನು ನಿರ್ವಹಿಸುತ್ತಿದೆ.

ಜೆ.ಡಿ. ವ್ಯಾನ್ಸ್ ಬಳಕೆ ಮಾಡುತ್ತಿದ್ದ ಬೊಯಿಂಗ್ 737 ವಿಮಾನವನ್ನು ಟ್ರಂಪ್ ಆಡಳಿತವು ವಲಸಿಗರನ್ನು ಗಡೀಪಾರು ಮಾಡಲು ಡಜನ್‌ಗೂ ಅಧಿಕ ಬಾರಿ ಬಳಕೆ ಮಾಡಿಕೊಂಡಿದೆ. ಕೇಂದ್ರ ಅಮೆರಿಕ ರಾಷ್ಟ್ರಗಳಿಗೆ ಈ ವಿಮಾನ ಹಾರಾಟ ನಡೆಸಿದೆ ಎಂದು ಸಾರ್ವಜನಿಕ ವಿಮಾನಯಾನ ದಾಖಲೆಗಳು ಮತ್ತು ವಿಮಾನಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್‌ಗಳು ತಿಳಿಸಿವೆ.

2018ರಲ್ಲಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಈ ವಿಮಾನದಲ್ಲಿ ಎಲ್‌ಸಲ್ವಡರ್ ಹಾಗೂ ಗ್ವಾಟೆಮಾಲಾಗೆ ಸುಮಾರು 360 ವಲಸಿಗರನ್ನು ಮೂರು ಟ್ರಿಪ್‌ಗಳಲ್ಲಿ ಸಾಗಿಸಲಾಗಿತ್ತು ಎಂದು ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಮಾನವ ಹಕ್ಕುಗಳ ಕೇಂದ್ರ ತಿಳಿಸಿದೆ. ಸಾರ್ವಜನಿಕ ದಾಖಲೆಗಳಿಂದ ಈ ಮಾಹಿತಿಯನ್ನು ಕೇಂದ್ರವು ಪಡೆದುಕೊಂಡಿದೆ.

ನಾಲ್ಕನೇ ಬಾರಿಗೆ ಅಮೆರಿಕದ ವಲಸೆ ಹಾಗೂ ಅಬಕಾರಿ ಜಾರಿ ಇಲಾಖೆಯು ಈ ವಿಮಾನದಲ್ಲಿ ಬಂಧನ ಕೇಂದ್ರಗಳಲ್ಲಿದ್ದ ಸುಮಾರು 144 ಮಂದಿಯನ್ನು ಸಾಗಿಸಿತ್ತು.

ಜೆ.ಡಿ. ವ್ಯಾನ್ಸ್ ಪ್ರಚಾರಕ್ಕೆ ಬಳಸಿದ ವಿಮಾನವನ್ನು ವಲಸಿಗರನ್ನು ಗಡೀಪಾರು ಮಾಡಲು ಬಳಸಲಾಗುತ್ತಿದೆ ಎನ್ನುವುದನ್ನು ಮೊದಲು ವರದಿ ಮಾಡಿದ್ದು ‘ಅರೊಜೋನಾ ಮಿರರ್’. ಪತ್ರಿಕೆಯ ಪ್ರಕಾರ ಈ ವಿಮಾನವು 2020ರಲ್ಲಿ ಬಂಧನ ಕೇಂದ್ರಗಳ ನಡುವೆ ಹಾಗೂ ಕೇಂದ್ರ ಹಾಗೂ ದಕ್ಷಿಣ ಅಮೆರಿಕ ದೇಶಗಳ ನಡುವೆ ಸುಮಾರು 35 ಬಾರಿ ಸಂಚರಿಸಿದೆ.

ಉಪಾಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಒಹಿಯೊದ ಸೆನೆಟರ್ ಆಗಿದ್ದ ವ್ಯಾನ್ಸ್ ಅವರಿಗೆ ವಿಮಾನದ ಹಿಂದಿನ ಮಾಹಿತಿ ಇತ್ತೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಈ ಬಗ್ಗೆ ಮಾಹಿತಿ ಬಯಸಿ ವ್ಯಾನ್ಸ್ ಅವರ ವಕ್ತಾರರನ್ನು ಸಂಪರ್ಕಿಸುವ ಪ್ರಯತ್ನ ಫಲ ಕಂಡಿಲ್ಲ. ಇದು ಭದ್ರತಾ ವಿಷಯವಾಗಿದ್ದರಿಂದ ಪ್ರತಿಕ್ರಿಯೆ ನೀಡಲು ಅಮೆರಿಕದ ಹೋಮ್‌ಲ್ಯಾಂಡ್ ಇಲಾಖೆ ನಿರಾಕರಿಸಿದೆ.

ಅಮೆರಿಕ ವಿಮಾನಯಾನ ಆಡಳಿತ ರಿಜಿಸ್ಟ್ರಿಯ ಪ್ರಕಾರ, ಸುಮಾರು 22 ವರ್ಷ ಹಳೆಯದಾದ ಈ ವಿಮಾನವನ್ನು ಮಿಸೌರಿಯ ಕಾನ್ಸಾಸ್ ಸಿಟಿಯಲ್ಲಿರುವ ಈಸ್ಟರ್ನ್ 737 ಅಸೆಟ್ ಹೋಲ್ಡಿಂಗ್ಸ್ ಎಲ್ಎಲ್‌ಸಿಯ ಒಡೆತನದಲ್ಲಿದೆ. ಈ ಬಗ್ಗೆ ಕೇಳಿದ ಮಾಹಿತಿಗೆ ಕಂಪನಿಯೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಈ ವರ್ಷದ ಏಪ್ರಿಲ್ ಮಧ್ಯದಿಂದ ಮೇ 24 ರವರೆಗೆ, ಮೆಕ್ಸಿಕೋ, ಹೊಂಡುರಾಸ್, ಗ್ವಾಟೆಮಾಲಾ ಮತ್ತು ಎಲ್‌ಸಾಲ್ವಡಾರ್‌ಗೆ 16 ಬಾರಿ ಈ ವಿಮಾನದ ಮೂಲಕ ವಲಸಿಗರನ್ನು ಗಡೀಪಾರು ಮಾಡಲಾಗಿದೆ ಎಂದು ಸ್ವಯಂ ಸೇವ ಸಂಸ್ಥೆಯೊಂದು ಹೇಳಿದ್ದು, ಅದನ್ನು ನ್ಯೂಯಾರ್ಕ್ ಟೈಮ್ಸ್ ಪರಿಶೀಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.