ADVERTISEMENT

ನಮ್ಮ ರಾಜಧಾನಿ ಮೇಲೆ ಭಯಾನಕ ಉಗ್ರರ ದಾಳಿ: ಜೆರುಸಲೆಂ ಗುಂಡಿನ ದಾಳಿ ಬಗ್ಗೆ ಇಸ್ರೇಲ್

ಪಿಟಿಐ
Published 9 ಸೆಪ್ಟೆಂಬರ್ 2025, 2:40 IST
Last Updated 9 ಸೆಪ್ಟೆಂಬರ್ 2025, 2:40 IST
   

ಟೆಲ್ ಅವಿವ್: ಜೆರುಸಲೆಂ ಗುಂಡಿನ ದಾಳಿಯನ್ನು ತನ್ನ ರಾಜಧಾನಿಯ ಮೇಲೆ ನಡೆದ ಭಯಾನಕ ಭಯೋತ್ಪಾದಕ ದಾಳಿ ಎಂದು ಇಸ್ರೇಲ್ ಖಂಡಿಸಿದೆ. ಇಂತಹ ಘಟನೆಗಳು ತಮ್ಮ ದೇಶದ ಮೇಲೆ ಈ ಹಿಂದೆ ನಡೆದ ದೌರ್ಜನ್ಯಗಳನ್ನು ನೆನಪಿಸುತ್ತವೆ ಎಂದು ಇಸ್ರೇಲ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಸ್ರೇಲ್ ಪೊಲೀಸರು, ತುರ್ತು ರಕ್ಷಣಾ ಸೇವೆಗಳು ಮತ್ತು ಸ್ಥಳೀಯ ಆಸ್ಪತ್ರೆಗಳ ಪ್ರಕಾರ, ಸೋಮವಾರ ಉತ್ತರ ಜೆರುಸಲೆಂನ ಜನನಿಬಿಡ ಬಸ್ ನಿಲ್ದಾಣದಲ್ಲಿ ಪ್ಯಾಲೆಸ್ಟೀನಿಯನ್ ದಾಳಿಕೋರರು ಗುಂಡು ಹಾರಿಸಿ, ಆರು ಜನರನ್ನು ಕೊಂದಿದ್ದಾರೆ. ಇನ್ನೂ 12 ಜನರು ಗಾಯಗೊಂಡಿದ್ದಾರೆ.

ಘಟನೆ ನಡೆದು ಗಂಟೆಗಳ ನಂತರ, ಪ್ರಸ್ತುತ ಭಾರತಕ್ಕೆ ಭೇಟಿ ನೀಡುತ್ತಿರುವ ಇಸ್ರೇಲ್‌ನ ಹಣಕಾಸು ಸಚಿವಾಲಯದ ಅಕೌಂಟೆಂಟ್ ಜನರಲ್ ಯಾಲಿ ರೋಥೆನ್‌ಬರ್ಗ್ ಪಿಟಿಐ ಜೊತೆ ಮಾತನಾಡಿದರು.

ADVERTISEMENT

ದಾಳಿ ನಡೆದಿರುವ ಬಸ್ ನಿಲ್ದಾಣ ನನಗೆ ತಿಳಿದಿದೆ. ಆ ದಾಳಿಯಲ್ಲಿ ನನ್ನ ಉದ್ಯೋಗಿಗಳಲ್ಲಿ ಒಬ್ಬರ ತಾಯಿ ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

‘ಇದೊಂದು ದುರದೃಷ್ಟಕರ ಘಟನೆಯಾಗಿದೆ. ಅಮಾನವೀಯ ಕೃತ್ಯಗಳನ್ನು ಮಾಡುವ ಉಗ್ರಗಾಮಿಗಳನ್ನು ಮಟ್ಟ ಹಾಕಲು ಬಯಸುವ ಎಲ್ಲ ದೇಶಗಳ ಜೊತೆ ನಾವಿದ್ದೇವೆ. ಇಸ್ರೇಲ್ ಮತ್ತು ಭಾರತ ಅಂತಹದ್ದೇ ಒಪ್ಪಂದ ಹೊಂದಿವೆ’ಎಂದಿದ್ದಾರೆ.

ಇಂತಹ ಘಟನೆಗಳನ್ನು ನೋಡಿದಾಗ, ಇಸ್ರೇಲ್‌ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ದೌರ್ಜನ್ಯಗಳು ನೆನಪಿಗೆ ಬರುತ್ತವೆ. ಮಾನವೀಯತೆಯ ಸುಧಾರಣೆಗಾಗಿ ಇದರ ವಿರುದ್ಧ ಹೋರಾಡಲು ನಮಗೆ ಜನರ ಕರೆ ಇದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ರೋಥೆನ್‌ಬರ್ಗ್ ಪ್ರಸ್ತುತ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಭಾಗವಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.