ADVERTISEMENT

ಆರೋಗ್ಯ ಕಾರ್ಯದರ್ಶಿ ಹುದ್ದೆಗೆ ಬೆಕೆರ್ರಾ ಆಯ್ಕೆ: ರಿಪಬ್ಲಿಕನ್‌ ಪಕ್ಷದ ವಿರೋಧ

ಜೋ ಬೈಡನ್‌ ಆಯ್ಕೆಗೆ ಆಕ್ಷೇಪ

ಏಜೆನ್ಸೀಸ್
Published 3 ಮಾರ್ಚ್ 2021, 9:41 IST
Last Updated 3 ಮಾರ್ಚ್ 2021, 9:41 IST
ಕ್ಸೆವಿಯರ್‌ ಬೆಕೆರ್ರಾ
ಕ್ಸೆವಿಯರ್‌ ಬೆಕೆರ್ರಾ   

ವಾಷಿಂಗ್ಟನ್: ಆರೋಗ್ಯ ಕಾರ್ಯದರ್ಶಿ ಹುದ್ದೆಗೆ ಕ್ಸೆವಿಯರ್‌ ಬೆಕೆರ್ರಾ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಯ್ಕೆ ಮಾಡಿರುವುದಕ್ಕೆ ರಿಪಬ್ಲಿಕನ್‌ ಪಕ್ಷದಿಂದ ವಿರೋಧ ವ್ಯಕ್ತವಾಗಿದೆ.

ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್‌ ಆಗಿದ್ದಾಗ ಕ್ಸೆವಿಯರ್‌ ಗರ್ಭಪಾತ ಹಕ್ಕುಗಳಿಗೆ ಸಂಬಂಧಿಸಿದಂತೆ ಬೆಂಬಲ ಸೂಚಿಸಿ ಸಮರ್ಥಿಸಿಕೊಂಡಿದ್ದರಿಂದ ವಿವಾದಕ್ಕೆ ಒಳಗಾಗಿದ್ದರು.

ಕ್ಸೆವಿಯರ್‌ ಅವರ ನಾಮನಿರ್ದೇಶನದ ಬಗ್ಗೆ ಸೆನೆಟ್‌ ಹಣಕಾಸು ಸಮಿತಿಯಲ್ಲಿ ಬುಧವಾರ ಮತ ಚಲಾವಣೆ ಮಾಡುವ ಮೂಲಕ ನಿರ್ಧಾರವಾಗಲಿದೆ.

ADVERTISEMENT

63 ವರ್ಷದ ಕ್ಸೆವಿಯರ್‌ ಬೆಕೆರ್ರಾ ಅವರು ಗರ್ಭಪಾತಕ್ಕೆ ನಿರ್ಬಂಧ ವಿಧಿಸಿದ್ದಕ್ಕೆ ಡೊನಾಲ್ಡ್‌ ಟ್ರಂಪ್‌ ಆಡಳಿತವನ್ನು ಟೀಕಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ 124 ಮೊಕದ್ದಮೆಗಳನ್ನು ಸಹ ದಾಖಲಿಸಿದ್ದರು.

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ 10ರಲ್ಲಿ 6 ಮತದಾರರು ಎಲ್ಲ ಪ್ರಕರಣಗಳಲ್ಲಿ ಅಥವಾ ಬಹುತೇಕ ಪ್ರಕರಣಗಳಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಬೇಕು ಎಂದು ‘ಎನ್‌ಒಆರ್‌ಸಿ’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.