ADVERTISEMENT

ತಾಲಿಬಾನ್‌ ಪರ ಧೋರಣೆ; ಜೋ ಬೈಡನ್ ವಿರುದ್ಧ ರಿಪಬ್ಲಿಕನ್‌ ನಾಯಕರ ಆರೋಪ

ಪಿಟಿಐ
Published 26 ಆಗಸ್ಟ್ 2021, 6:09 IST
Last Updated 26 ಆಗಸ್ಟ್ 2021, 6:09 IST
ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಕ್‌ಕಾರ್ತಿ
ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಕ್‌ಕಾರ್ತಿ   

ವಾಷಿಂಗ್ಟನ್‌: ಅಫ್ಗಾನಿಸ್ತಾನ ಕುರಿತ ಅಮೆರಿಕದ ನೀತಿಯನ್ನು ಟೀಕಿಸಿರುವ ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಕ್‌ಕಾರ್ತಿ, 'ಅಧ್ಯಕ್ಷ ಜೋ ಬೈಡನ್ ಅವರು ತಾಲಿಬಾನ್‌ ಪರ ಮೃದುಧೋರಣೆ ಹೊಂದಿದ್ದು, ಅಮೆರಿಕದ ಮಿತ್ರರಾಷ್ಟ್ರಗಳಿಗೆ ವಿರುದ್ಧವಾಗಿದ್ದಾರೆ'ಎಂದು ಆರೋಪಿಸಿದ್ದಾರೆ.

ಕ್ಯಾಪಿಟಲ್‌ ಹಿಲ್ಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸತ್ತಿನ ಅಲ್ಪಸಂಖ್ಯಾತ ವಿಭಾಗದ ನಾಯಕ ಮ್ಯಾಕ್‌ಕಾರ್ತಿ, ‘ಅಫ್ಗಾನಿಸ್ತಾನದ ವಿಷಯದಲ್ಲಿ ಅಧ್ಯಕ್ಷರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಅಪಾಯ ಸೃಷ್ಟಿಯಾಗಲು ಕಾರಣವಾಗುತ್ತಿದೆ‘ ಎಂದು ಹೇಳಿದ್ದಾರೆ.

‘ಅಫ್ಗಾನಿಸ್ತಾನದಿಂದ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಾಗರಿಕರ ತೆರವುಗೊಳಿಸುವ ವಿಷಯದಲ್ಲಿ ನಮ್ಮ ಮಿತ್ರರಾಷ್ಟ್ರಗಳೇ ನಮ್ಮನ್ನು ಟೀಕಿಸುವಂತಾಗಿದೆ. ಅಫ್ಗಾನಿಸ್ತಾನದಲ್ಲಿರುವ ತಮ್ಮ ಜನರನ್ನು ಕರೆತರಲು, ಈಗ ವಿಧಿಸಿರುವ ಗಡುವನ್ನು(ಆ.31) ವಿಸ್ತರಿಸುವಂತೆ ಮಿತ್ರರಾಷ್ಟ್ರಗಳು ಅಮೆರಿಕವನ್ನು ಕೇಳುತ್ತಿವೆ. ಅವರು ಕೇಳುತ್ತಿರುವುದು ತಮ್ಮ ನಾಗರಿಕರನ್ನು ಕರೆತರುವುದಕ್ಕಲ್ಲದೇ ಬೇರೆ ಯಾವುದಕ್ಕೂ ಅಲ್ಲ‘ ಎಂದು ಹೇಳಿದ್ದಾರೆ.

ADVERTISEMENT

‘ಬಹಳ ವರ್ಷಗಳಿಂದ ಮಿತ್ರರಾಷ್ಟ್ರಗಳೊಂದಿಗೆ ನಾವು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಬೈಡನ್ ತಾಲಿಬಾನ್‌ ಪರವಾಗಿದ್ದು, ಮಿತ್ರರಾಷ್ಟ್ರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಿಂದಿನ ಯಾವ ಆಡಳಿತದಲ್ಲೂ ಹೀಗೆ ಆಗಿರಲಿಲ್ಲ. ಇದು ಅಮೆರಿಕದ ಬಹುದೊಡ್ಡ ವೈಫಲ್ಯ. ನನ್ನ ಜೀವನದಲ್ಲೇ ವಿದೇಶಾಂಗ ನೀತಿ ವಿಫಲವಾಗಿದ್ದನ್ನು ಕಂಡಿಲ್ಲ. ಇದು ನಮ್ಮ ದೇಶದ ಮೇಲೆ ಅಲ್ಪಾವಧಿಗೆ ಮಾತ್ರವಲ್ಲ, ದೀರ್ಘಾವಧಿಯಲ್ಲೂ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ‘ ಎಂದು ಮ್ಯಾಕ್‌ಕಾರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಇಂಥ ವಿದೇಶಾಂಗ ನೀತಿಯ ಮೂಲಕ ಜೋ ಬೈಡನ್ ಅವರು ಜಾಗತಿಕ ವೇದಿಕೆಗಳಲ್ಲಿ ಅಮೆರಿಕದ ಗೌರವವನ್ನು ಹಾಳುಮಾಡುತ್ತಿದ್ದಾರೆ‘ ಎಂದು ದೂಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.