ಒಟ್ಟಾವ: ಕೆನಡಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಜಸ್ಟಿನ್ ಟ್ರುಡೊ ಅವರು ಸೋಮವಾರ ಪ್ರಕಟಿಸಿದರು. ಆಡಳಿತಾರೂಢ ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡಿದ ತಕ್ಷಣ ತಾವು ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವುದಾಗಿ ಅವರು ಹೇಳಿದರು.
ತಮ್ಮ ಜನಪ್ರಿಯತೆ ನಿರಂತರವಾಗಿ ಕುಸಿಯುತ್ತಿರುವುದು ಹಾಗೂ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸೃಷ್ಟಿಯಾಗಿರುವ ನಡುವೆ ಟ್ರುಡೊ ಈ ತೀರ್ಮಾನ ಪ್ರಕಟಿಸಿದ್ದಾರೆ.
‘ಪಕ್ಷವು ಮುಂದಿನ ನಾಯಕನನ್ನು ಆಯ್ಕೆ ಮಾಡಿದ ನಂತರ, ಪಕ್ಷದ ನಾಯಕ ಹಾಗೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಾನು ಉದ್ದೇಶಿಸಿದ್ದೇನೆ’ ಎಂದು 2015ರಿಂದಲೂ ಅಧಿಕಾರದಲ್ಲಿರುವ ಟ್ರುಡೊ ಅವರು ಪತ್ರಕರ್ತರ ಬಳಿ ಹೇಳಿದರು. ಟ್ರುಡೊ ಅವರು ಹಂಗಾಮಿ ಪ್ರಧಾನಿಯಾಗಿ ಇನ್ನೂ ಎಷ್ಟು ದಿನ ಅಧಿಕಾರದಲ್ಲಿ ಇರಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಅಂದರೆ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಟ್ರುಡೊ ಅವರೇ ಕೆನಡಾ ಪ್ರಧಾನಿಯಾಗಿ ಇರುತ್ತಾರೆ. ಟ್ರಂಪ್ ಅವರು ಆರಂಭಿಸಬಹುದಾದ ವಾಣಿಜ್ಯ ಸಮರಕ್ಕೆ ಆರಂಭಿಕ ಪ್ರತಿಕ್ರಿಯೆ ನೀಡುವ ಹೊಣೆಯು ಟ್ರುಡೊ ಅವರ ಮೇಲೆ ಇರುತ್ತದೆ.
ಈ ವರ್ಷ ಕೆನಡಾದಲ್ಲಿ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಲಿಬರಲ್ ಪಕ್ಷವನ್ನು ಮುನ್ನಡೆಸಲು ತಾವು ಅತ್ಯುತ್ತಮ ನಾಯಕ ಅಲ್ಲ ಎಂದು ಟ್ರುಡೊ ಹೇಳಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ಪಾತ್ರವಿದೆ ಎಂದು ಟ್ರುಡೊ ಆರೋಪಿಸಿದ ನಂತರದಲ್ಲಿ ಭಾರತ ಮತ್ತು ಕೆನಡಾ ಸಂಬಂಧವು ತೀರಾ ಹಳಸಿತು. ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು.
‘ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರ ಇದೆ’ ಎಂದು ಆರೋಪಿಸಿದ್ದ ಟ್ರುಡೊ ಅವರು ನಂತರದಲ್ಲಿ ‘ಈ ಆರೋಪ ಮಾಡಿದಾಗ ನನ್ನಲ್ಲಿ ಯಾವುದೇ ಬಲವಾದ ಸಾಕ್ಷಿ ಪುರಾವೆಗಳು ಇರಲಿಲ್ಲ’ ಎಂದು ಹೇಳಿದ್ದರು. ‘ಗುಪ್ತಚರ ಮಾಹಿತಿ ಮಾತ್ರ ಇತ್ತು’ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.