ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ದೇಶದಾದ್ಯಂತ ವರ್ಚುವಲ್ ಸ್ವರೂಪದಲ್ಲಿ ನಡೆದ ಮತದಾನದಲ್ಲಿ ಕಮಲಾ ಹ್ಯಾರಿಸ್ ಹೆಚ್ಚಿನ ಮತ ಗಳಿಸಿದ್ದು, ಪಕ್ಷದ ಅಭ್ಯರ್ಥಿಯಾಗುವ ಅರ್ಹತೆ ಪಡೆದಿದ್ದಾರೆ.
ಅಧ್ಯಕ್ಷ ಸ್ಥಾನದ ಚುನಾವಣೆಗಾಗಿ ಅಭ್ಯರ್ಥಿ ಆಯ್ಕೆಗೆ ನಡೆದ ಮತದಾನದಲ್ಲಿ 59 ವರ್ಷದ ಕಮಲಾ ಪರ 3,923 ಮತಗಳು ಬಿದ್ದವು. ಶೇ 99ರಷ್ಟು ಜನರು ಇವರನ್ನು ಬೆಂಬಲಿಸಿದ್ದಾರೆ. ಮತದಾನದ ಗಡುವು ಮುಗಿದ ಬಳಿಕ ಪಕ್ಷ ಈ ಮಾಹಿತಿಯನ್ನು ಪ್ರಕಟಿಸಿದೆ.
ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ (ಡಿಎನ್‌ಸಿ) ಅಧ್ಯಕ್ಷ ಜೈಮೆ ಹ್ಯಾರಿಸನ್ ಮತ್ತು ಡೆಮಾಕ್ರಟಿಕ್ ರಾಷ್ಟ್ರೀಯ ಸಂಚಾಲನಾ ಸಮಿತಿ ಅಧ್ಯಕ್ಷ ಮಿನ್ಯೊನ್ ಮೂರೆ ಅವರು, ‘ಮತದಾನಕ್ಕೆ ಅರ್ಹತೆಗೆ ಅಗತ್ಯವಿದ್ದ 300 ಪ್ರಮುಖರ ಸಹಿಯನ್ನು ಕಮಲಾ ಹೊರತುಪಡಿಸಿ ಇತರೆ ಯಾವುದೇ ಆಕಾಂಕ್ಷಿ ಪಡೆದಿಲ್ಲ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯ ಆಯ್ಕೆಗೆ ನಡೆಯುವ ಮತದಾನ ಪ್ರಕ್ರಿಯೆ ಆಗಸ್ಟ್ 1ರಿಂದ 5ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾದರೆ, ಈ ಸ್ಥಾನಕ್ಕೆ ಸ್ಪರ್ಧಿಸಲಿರುವ ಭಾರತ–ಅಮೆರಿಕನ್, ಆಫ್ರಿಕನ್–ಅಮೆರಿಕನ್ ಮೂಲದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.
2008ರಲ್ಲಿ ಆಫ್ರಿಕನ್–ಅಮೆರಿಕನ್ ಮೂಲದ ಬರಾಕ್ ಒಬಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಆಯ್ಕೆಯಾಗಿದ್ದರು. ಹಿಲರಿ ಕ್ಲಿಂಟನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೊದಲ ಮಹಿಳೆ ಆಗಿದ್ದಾರೆ.
ಒಬಾಮಾ, ಹಿಲರಿ ಕ್ಲಿಂಟನ್ ಮತ್ತು ಕಮಲಾ ಹ್ಯಾರಿಸ್ ಮೂವರೂ ಡೆಮಾಕ್ರಾಟಿಕ್ ಪಕ್ಷದವರು ಎಂಬುದು ಗಮನಾರ್ಹ. ಕಳೆದ 16 ವರ್ಷಗಳಲ್ಲಿ 12 ವರ್ಷ ಇದೇ ಪಕ್ಷ ಅಧಿಕಾರ ನಡೆಸಿದೆ.
ಅಮೆರಿಕದ ಉಪಾಧ್ಯಕ್ಷೆ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ‘ಏನೇ ಹೇಳುವುದಿದ್ದರೂ ನನ್ನ ಎದುರಿಗೇ ಹೇಳಿ’ ಎಂದು ಅವರನ್ನು ಕೆಣಕಿದ್ದಾರೆ.
ಮಂಗಳವಾರ ಚುನಾವಣಾ ರ್‍ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಅವರು ತಾವು ಕಣಕ್ಕೆ ಇಳಿದ ನಂತರದಲ್ಲಿ ಅಧ್ಯಕ್ಷೀಯ ಚುನಾವಣೆಯ ಸ್ವರೂಪವೇ ಬದಲಾಗಿದೆ ಎಂದು ಹೇಳಿದ್ದಾರೆ. ‘ಟ್ರಂಪ್ ಅವರು ತಾವು ಮೊದಲು ಒಪ್ಪಿಕೊಂಡಿದ್ದ ಚರ್ಚೆಯಲ್ಲಿ ಪಾಲ್ಗೊಳ್ಳುವುದರಿಂದ ಕಳೆದ ವಾರ ಹಿಂದೆ ಸರಿದಿದ್ದಾರೆ’ ಎಂದು ಕಮಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.