ADVERTISEMENT

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಪಿಟಿಐ
Published 7 ಜೂನ್ 2021, 1:52 IST
Last Updated 7 ಜೂನ್ 2021, 1:52 IST
ಗ್ವಾಟೆಮಾಲಾ ತಲುಪಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ 'ಗಾರ್ಡ್ ಆಫ್ ಆರ್ನರ್'
ಗ್ವಾಟೆಮಾಲಾ ತಲುಪಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ 'ಗಾರ್ಡ್ ಆಫ್ ಆರ್ನರ್'   

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ತೊಂದರೆಯಿಂದಾಗಿ ಟೇಕಾಫ್ ಆದ ಕೂಡಲೇ ತುರ್ತಾಗಿ ಭೂಸ್ಪರ್ಶ ನಡೆಸಿದೆ.

ವಿದೇಶ ಪ್ರವಾಸದಲ್ಲಿದ್ದ ಕಮಲಾ ಹ್ಯಾರಿಸ್ ಗ್ವಾಟೆಮಾಲಾಕ್ಕೆ ಹೊರಟಿದ್ದರು. ಆದರೆ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಲ್ಲಿ ಇಳಿಯಬೇಕಾಯಿತು.

ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಕಮಲಾ ಹ್ಯಾರಿಸ್, ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.

ADVERTISEMENT

ವಾಷಿಂಗ್ಟನ್ ಹೊರವಲದಲ್ಲಿರುವ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ 'ಏರ್ ಫೋರ್ಸ್ ಟು' ವಿಮಾನ ತುರ್ತು ಭೂಸ್ಪರ್ಶ ನಡೆಸಿತ್ತು.

ಇದಾದ ಬಳಿಕ ವಿಮಾನ ಬದಲಿಸಿದ ಕಮಲಾ ಹ್ಯಾರಿಸ್, ಪ್ರಯಾಣ ಬೆಳೆಸಿದರು. ಅಲ್ಲದೆ ಭಾನುವಾರ ಸಂಜೆಯ ಹೊತ್ತಿಗೆ ಗ್ವಾಟೆಮಾಲಾಕ್ಕೆ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಇಳಿಸಲಾಯಿತು ಎಂದು ಕಮಲಾ ಹ್ಯಾರಿಸ್ ವಕ್ತಾರೆ ಸೈಮನ್ ಸ್ಯಾಂಡರ್ಸ್ ತಿಳಿಸಿದ್ದಾರೆ.

ವಿಮಾನದ ಲ್ಯಾಂಡಿಂಗ್ ಗೇರ್‌ನಿಂದ ವಿಚಿತ್ರ ಶಬ್ದವೊಂದು ಕೇಳಿಸಿತ್ತು. ಆದರೆ ಲ್ಯಾಂಡಿಂಗ್ ಸುರಕ್ಷಿತವಾಗಿತ್ತು ಎಂದು ಕಮಲಾ ಜೊತೆಗೆ ಪ್ರಯಾಣ ಬೆಳೆಸಿದ್ದ ಪತ್ರಕರ್ತರೊಬ್ಬರು ವಿವರಿಸಿದ್ದಾರೆ.

ಈ ವಾರದಲ್ಲಿ ಗ್ವಾಟೆಮಾಲಾ ಮತ್ತು ಮೆಕ್ಸಿಕೊಗೆ ಭೇಟಿ ನೀಡಲಿರುವ ಹ್ಯಾರಿಸ್, ಕೋವಿಡ್ ಪೀಡಿತ ಪ್ರದೇಶಗಳಲ್ಲಿ ಭರವಸೆಯ ಆಶಾಕಿರಣವಾಗಲಿದ್ದಾರೆ. ಈ ಪ್ರದೇಶದ ಮೂಲಕ ದಾಖಲೆ ರಹಿತ ವಲಸಿಗರು ಅನಧಿಕೃತವಾಗಿ ಅಮೆರಿಕಕ್ಕೆ ಪ್ರವೇಶಿಸಲು ಯತ್ನಿಸುತ್ತಾರೆ.

ಹ್ಯಾರಿಸ್ ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದ್ದು, ವಲಸಿಗರ ಮೂಲ ಕಾರಣಗಳನ್ನು ನಿಭಾಯಿಸುವ ಪ್ರಯತ್ನದಲ್ಲಿದ್ದಾರೆ. ಇದು ಶ್ವೇತ ಭವನ ಎದುರಿಸುತ್ತಿರುವ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.