ಕಪಿಲ್ ಶರ್ಮಾ ಇನ್‌ಸ್ಟಾಗ್ರಾಮ್ ಚಿತ್ರ
ಸರ್‍ರೆ (ಕೆನಡಾ): ಹಾಸ್ಯ ನಟ ಕಪಿಲ್ ಶರ್ಮಾ ಅವರು ಕೆನಡಾದ ಸರ್‍ರೆ ನಗರದಲ್ಲಿ ಹೊಸದಾಗಿ ಆರಂಭಿಸಿರುವ ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ದುಷ್ಕರ್ಮಿಗಳು ಎರಡನೇ ಬಾರಿಗೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ದುಷ್ಕರ್ಮಿಗಳು 25 ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯಿ ಎಂಬ ಎರಡು ಗ್ಯಾಂಗ್‌ಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿವೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಜುಲೈ 10ರಂದು ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿ ನಡೆಯುವಾಗ ಕೆಫೆಯ ಸಿಬ್ಬಂದಿ ಒಳಗೇ ಇದ್ದರು. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ ಮತ್ತು ಯಾರೊಬ್ಬರಿಗೂ ಗಾಯಗಳಾಗಿಲ್ಲ. ಆದರೆ ಕೆಫೆಗೆ ಹಾನಿಯಾಗಿದೆ ಎಂದು ಸುರ್‍ರೆ ನಗರದ ಪೊಲೀಸರು ತಿಳಿಸಿದ್ದರು.
ಘಟನೆಗೆ ಪ್ರತಿಕ್ರಿಯಿಸಿದ್ದ ಶರ್ಮಾ, ‘ಘಟನೆ ಆಘಾತ ತರಿಸಿದೆ. ರುಚಿಕರವಾದ ಕಾಫಿ ಮತ್ತು ಸ್ನೇಹಮಯ ಸಂಭಾಷಣೆ ಮೂಲಕ ಜನರಿಗೆ ಸಂತೋಷವನ್ನು ತರುವ ಭರವಸೆಯೊಂದಿಗೆ ಕ್ಯಾಪ್ಸ್ ಕೆಫೆಯನ್ನು ತೆರೆದಿದ್ದೇವೆ. ಆ ಕನಸಿಗೆ ಪೆಟ್ಟು ಬಿದ್ದರೆ ಸಹಿಸುವುದಿಲ್ಲ. ನಾವು ಮತ್ತೆ ಎದ್ದು ನಿಲ್ಲುತ್ತೇವೆ. ಯಾವುದಕ್ಕೂ ಭಯ ಪಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.