ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರದ ವಿರುದ್ಧ ಮುಂದಿನ ವರ್ಷ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರೆಟಿಕ್ ಪಾರ್ಟಿ (ಎನ್‌ಡಿಪಿ) ಹೇಳಿದೆ.
ಎನ್‌ಡಿಪಿ ಪಕ್ಷದ ನಾಯಕ, ಭಾರತ ಮೂಲದ ಸಂಸದ ಜಗ್‌ಮೀತ್ ಸಿಂಗ್ ಅವರು ಪ್ರಧಾನಿಗೆ ಬರೆದ ಬಹಿರಂಗ ಪತ್ರದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದ ಟ್ರುಡೊ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿ ನಿಂತಿದೆ.
ಎನ್‌ಡಿಪಿಯು ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಇತರ ವಿರೋಧ ಪಕ್ಷಗಳು ಅದನ್ನು ಬೆಂಬಲಿಸಿದರೆ ಟ್ರುಡೊ ಸರ್ಕಾರ ಉರುಳಲಿದೆ. ಹಾಗಾದಲ್ಲಿ, ಕೆನಡಾದಲ್ಲಿ ಅವಧಿಗೆ ಮುನ್ನವೇ ಚುನಾವಣೆ ನಡೆಯಲಿದೆ. ನಿಗದಿತ ವೇಳಾಪಟ್ಟಿಯಂತೆ ಸಾರ್ವತ್ರಿಕ ಚುನಾವಣೆ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಡೆಯಬೇಕು.
‘ಲಿಬರಲ್ ಪಕ್ಷದವರು ಮತ್ತೊಂದು ಅವಧಿಗೆ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ. ಅದಕ್ಕಾಗಿಯೇ ಈ ಸರ್ಕಾರವನ್ನು ಉರುಳಿಸಲು ಮುಂದಿನ ಅಧಿವೇಶನದಲ್ಲಿ ನಾವು ಅವಿಶ್ವಾಸ ನಿರ್ಣಯವನ್ನು ಮಂಡಿಸುತ್ತೇವೆ. ಕೆನಡಾದ ಜನರಿಗೆ ಅವರ ಪರವಾಗಿ ಕೆಲಸ ಮಾಡುವ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತೇವೆ’ ಎಂದು ಜಗ್‌ಮೀತ್ ಪತ್ರದಲ್ಲಿ ತಿಳಿಸಿದ್ದಾರೆ.
2019ರ ಅಕ್ಟೋಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಪಿ, ‘ಕಿಂಗ್ ಮೇಕರ್‘ ಆಗಿ ಹೊರಹೊಮ್ಮಿತ್ತು. ಟ್ರುಡೊ ಅವರ ಲಿಬರಲ್ ಪಕ್ಷ ಅಧಿಕಾರಕ್ಕೆ ಬರಲು ಎನ್‌ಡಿಪಿ ಬೆಂಬಲ ನೀಡಿತ್ತು.
ಸಿಂಗ್ ಕೈಗೊಂಡ ನಿರ್ಧಾರವು, ಟ್ರುಡೊ ಅವರು ಈ ವಾರ ಅನುಭವಿಸಿದ ರಾಜಕೀಯ ಹಿನ್ನಡೆಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಉಪ ಪ್ರಧಾನಿ ಮತ್ತು ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಸೋಮವಾರ ದಿಢೀರ್ ರಾಜೀನಾಮೆ ನೀಡಿದ್ದರು. ಟ್ರುಡೊ ಜತೆಗಿನ ಭಿನ್ನಾಭಿಪ್ರಾಯದಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.