ADVERTISEMENT

Los Angeles Wildfires: ಬೆಂಕಿ ನಂದಿಸಲು ಹರಸಾಹಸ

ಲಾಸ್‌ ಏಂಜಲೀಸ್‌: ಸಾವಿನ ಸಂಖ್ಯೆ 16ಕ್ಕೆ ಏರಿಕೆ * ಮತ್ತೊಮ್ಮೆ ತೀವ್ರಗೊಳ್ಳಲಿರುವ ಗಾಳಿಯ ವೇಗ

ಏಜೆನ್ಸೀಸ್
ರಾಯಿಟರ್ಸ್
Published 13 ಜನವರಿ 2025, 0:23 IST
Last Updated 13 ಜನವರಿ 2025, 0:23 IST
<div class="paragraphs"><p>ಲಾಸ್‌ ಏಂಜಲೀಸ್‌</p></div>

ಲಾಸ್‌ ಏಂಜಲೀಸ್‌

   

(ರಾಯಿಟರ್ಸ್ ಚಿತ್ರ)

ಲಾಸ್‌ ಏಂಜಲೀಸ್‌: ಇಲ್ಲಿನ ಪೆಸಿಫಿಕ್‌ ಪ್ಯಾಲಿಸೈಡ್ಸ್‌ ಹಾಗೂ ಈಟನ್‌ ಕೆಯಾನ್‌ ನಗರಗಳಲ್ಲಿ ಪ್ರಬಲವಾಗಿ ಉರಿಯುತ್ತಿರುವ ಕಾಳ್ಗಿಚ್ಚಿನಲ್ಲಿ ಕ್ರಮವಾಗಿ 5 ಮತ್ತು 11 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ. ‘ಅಗ್ನಿಶಾಮಕ ದಳದ ಸಿಬ್ಬಂದಿಯು ಮನೆ ಮನೆಗೆ ತೆರಳಿ ಶೋಧ ಕಾರ್ಯ ನಡೆಸಲು ಸಾಧ್ಯವಾದರೆ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಒಟ್ಟು ಐದು ಕಡೆ ವ್ಯಾಪಿಸಿರುವ ಕಾಳ್ಗಿಚ್ಚುಗಳ ಪೈಕಿ ಪೆಸಿಫಿಕ್‌ ಪ್ಯಾಲಿಸೈಡ್ಸ್‌ ಹಾಗೂ ಈಟನ್‌ ಕೆಯಾನ್‌ ನಗರಗಳಲ್ಲಿನ ಕಾಳ್ಗಿಚ್ಚು ಹೆಚ್ಚು ಪ್ರಬಲವಾಗಿದೆ ಮತ್ತು ದಿನೇ ದಿನೇ ವ್ಯಾಪಿಸುತ್ತಲೇ ಇದೆ. ಶನಿವಾರವೂ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ದಟ್ಟ ಹೊಗೆಯಾಡುತ್ತಿರುವ ಕಾರಣ ಕ್ಯಾಲಿಫೋರ್ನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

‘ಸಂತಾ ಆನಾ’ ಸುಂಟರ ಗಾಳಿಯು ಶನಿವಾರ ಸಂಜೆಯಿಂದ ಮತ್ತೊಮ್ಮೆ ವೇಗವಾಗಿ ಬೀಸುತ್ತಿದೆ. ಗಂಟೆಗೆ 48 ಕಿ.ಮೀನಿಂದ 112 ಕಿ.ಮೀನಷ್ಟು ವೇಗವಾಗಿ ಚಲಿಸಲಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರ ಬೆಳಿಗ್ಗೆವರೆಗೂ ಇದೇ ಸ್ಥಿತಿ ಇರಲಿದೆ ಎಂದೂ ಹೇಳಿದೆ.

ಎರಡು ರೀತಿಯಲ್ಲಿ ಕಾಳ್ಗಿಚ್ಚನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಒಂದು, ಹೆಲಿಕಾಪ್ಟರ್‌ ಮೂಲಕ ಬೆಟ್ಟ ಪ್ರದೇಶಗಳಲ್ಲಿ ಬೆಂಕಿಯನ್ನು ನಂದಿಸಲು ಕೆಂಪು ಬಣ್ಣದ ರಾಸಾಯನಿಕವನ್ನು ಸಿಂಪಡಿಸುತ್ತಿದ್ದಾರೆ. ಮತ್ತೊಂದೆಡೆ ತಳಮಟ್ಟದಲ್ಲಿ ಮನೆಗಳಿಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸುತ್ತಿದ್ದಾರೆ.

ಹಾಲಿವುಡ್‌ ಹಿಲ್ಸ್‌ನಲ್ಲಿ ಹೊತ್ತಿಕೊಂಡಿದ್ದ ಕಾಳ್ಗಿಚ್ಚನ್ನು ಸಂಪೂರ್ಣ ನಂದಿಸಲಾಗಿತ್ತು. ಜೊತೆಗೆ, ಸ್ಯಾನ್‌ ಫೆರ್ನಾಂಡೊ ವ್ಯಾಲಿಯಲ್ಲಿ ಉರಿಯುತ್ತಿರುವ ಕಾಳ್ಗಿಚ್ಚನ್ನು ಶೇ 90ರಷ್ಟು ನಿಯಂತ್ರಿಸಲಾಗಿದೆ. ಆದರೆ, ಪೆಸಿಫಿಕ್‌ ಪ್ಯಾಲಿಸೈಡ್ಸ್‌ನ ಕಾಳ್ಗಿಚ್ಚು ವೇಗವಾಗಿ ವ್ಯಾಪಿಸುತ್ತಿರುವ ಕಾರಣ ಈ ಎರಡೂ ಪ್ರದೇಶಗಳಿಗೆ ಮತ್ತೊಮ್ಮೆ ಕಾಳ್ಗಿಚ್ಚು ಹಬ್ಬುವ ಆತಂಕ ಎದುರಾಗಿದೆ. ಹೆಚ್ಚು ಜನಸಂದಣಿ ಇರುವ ಈ ಪ್ರದೇಶಗಳಲ್ಲಿ ಈಗಾಗಲೇ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ.

ಕಾಳ್ಗಿಚ್ಚು ಉರಿಯುತ್ತಲೇ ಇದೆ. ಬೆಂಕಿಯನ್ನು ಹೇಗೆ ನಂದಿಸಬೇಕು ಎಂಬುದು ಈ ಅದಕ್ಷ ರಾಜಕಾರಣಿಗಳಿಗೆ ಗೊತ್ತಿಲ್ಲ. ಇವರಿಗೆಲ್ಲ ಏನಾಗಿದೆ
ಡೊನಾಲ್ಡ್‌ ಟ್ರಂಪ್‌ ಚುನಾಯಿತ ಅಧ್ಯಕ್ಷ

ಪ್ರಮುಖಾಂಶಗಳು

* ಕ್ಯಾಲಿಫೋರ್ನಿಯಾ ರಾಜ್ಯದ ಸುತ್ತ ಇರುವ ಏಳು ರಾಜ್ಯಗಳು ಕಾಳ್ಗಿಚ್ಚು ನಿಯಂತ್ರಿಸಲು ಸಹಕಾರ ನೀಡಲು ಮುಂದಾಗಿವೆ. ಅಮೆರಿಕದ ನೆರೆಯ ದೇಶಗಳಾದ ಕೆನಡಾ ಹಾಗೂ ಮೆಕ್ಸಿಕೊ ವೈಮಾನಿಕ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ

* ಲಾಸ್‌ ಏಂಜಲೀಸ್‌ನಲ್ಲಿರುವ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ‘ಗೆಟ್ಟಿ ಸೆಂಟರ್‌’ ವಸ್ತುಸಂಗ್ರಹಾಲಯಕ್ಕೂ ಕಾಳ್ಗಿಚ್ಚು ವ್ಯಾಪಿಸುವ ಸಂಭವಿದೆ. ಚಿತ್ರಕಲೆ ಇನ್‌ಸ್ಟಾಲೇಷನ್‌ ಆರ್ಟ್‌ ಸೇರಿದಂತೆ ವಿವಿಧ ಕಲೆಗಳನ್ನು ಇಲ್ಲಿ ಪೋಷಿಸಲಾಗುತ್ತಿದೆ. 1400ನೇ ಇಸವಿಯ ಚಿತ್ರಕಲೆಗಳೂ ಇಲ್ಲಿವೆ. ಪ್ರಸಿದ್ಧ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ಬೆಂಕಿಯ ಭೀತಿ ಎದುರಿಸುತ್ತಿದೆ

* ಸ್ಥಳಾಂತರಗೊಂಡ ಜನರು ಬೇರೆಡೆ ಮನೆಗಳನ್ನು ಬಾಡಿಗೆ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ಮನೆಮಾಲೀಕರು ಎರಡು–ಮೂರು ಪಟ್ಟು ಹೆಚ್ಚಿನ ಬಾಡಿಗೆ ಕೇಳುತ್ತಿರುವುದು ಕಂಡುಬರುತ್ತಿದೆ.

* ಬೆಂಕಿಯಿಂದ ಸುಟ್ಟ ತಮ್ಮ ಮನೆಗಳ ಬಳಿಗೆ ಯಾರೂ ಬರಬಾರದು ಎಂದು ಆಡಳಿತವು ಜನರಿಗೆ ಮನವಿ ಮಾಡಿದೆ. ಬೆಂಕಿ ಸಂಪೂರ್ಣ ಆರಿಲ್ಲ. ಜೊತೆಗೆ ಹೊಗೆಯು ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು ಎಂದಿದೆ

₹11.63 ಲಕ್ಷ ಕೋಟಿ: ಅಂದಾಜು ನಷ್ಟ

ಅಮೆರಿಕವು ತನ್ನ ಇತಿಹಾಸದಲ್ಲಿಯೇ ಈ ಕಾಳ್ಗಿಚ್ಚು ದುರಂತವು ಪ್ರಮುಖವಾಗಿದೆ. ಜೊತೆಗೆ ದೇಶವು ಅನುಭವಿಸಿದ ನಷ್ಟದ ಪ್ರಮಾಣದಲ್ಲಿಯೂ ಈ ದುರಂತ ಮೊದಲ ಸ್ಥಾನದಲ್ಲಿದೆ. ಸಂಸ್ಥೆಯೊಂದರ ಪ್ರಾಥಮಿಕ ಅಂದಾಜಿನ ಪ್ರಕಾರ 135 ಬಿಲಿಯನ್‌ ಡಾಲರ್‌ನಿಂದ (ಸುಮಾರು ₹11.63 ಲಕ್ಷ ಕೋಟಿ) 150 ಬಿಲಿಯನ್‌ ಡಾಲರ್‌ (ಸುಮಾರು 12.92 ಲಕ್ಷ ಕೋಟಿ) ನಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.