ಮಾರ್ಕ್ ಜುಕರ್‌ಬರ್ಗ್
ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೊರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ಉಂಟಾಗಿರುವ ಭೀಕರ ಕಾಳ್ಗಿಚ್ಚಿನ ಬಗ್ಗೆ ಮೆಟಾ ಕಂಪನಿ ಅಧ್ಯಕ್ಷ ಹಾಗೂ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಪ್ರತಿಕ್ರಿಯಿಸಿದ್ದಾರೆ.
ಈ ಭೀಕರ ವಿನಾಶದ ಫೋಟೊ ಮತ್ತು ವಿಡಿಯೊಗಳನ್ನು ನನ್ನಿಂದ ನೋಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬರ ಸುರಕ್ಷತೆಗಾಗಿ ನಾನು ಹಾಗೂ ನನ್ನ ಪತ್ನಿ ಪ್ರಿನ್ಸಿಲ್ಲಾ ಪ್ರಾರ್ಥಿಸುತ್ತಿದ್ದೇವೆ ಎಂದಿದ್ದಾರೆ. ಈ ಕುರಿತು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಕಂಪನಿ ಕಡೆಯಿಂದ ಸೇಫ್ಟಿ ಚೆಕ್ ಮಾಡುತ್ತಿದ್ದೇವೆ. ಅದರ ಪ್ರಕಾರ ಲಾಸ್ ಏಂಜಲೀಸ್‌ನಲ್ಲಿ ಇದುವರೆಗೆ 4 ಲಕ್ಷ ಜನ ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ನೀವೆಲ್ಲರೂ ಸುರಕ್ಷಿತವಾಗಿರಿ ಎಂದು ವಿವರಿಸಿದ್ದಾರೆ.
ಕಾಳ್ಗಿಚ್ಚಿನಲ್ಲಿ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಸಾವು–ನೋವಿನ ಪ್ರಮಾಣ ಇನ್ನೂ ಉಲ್ಬಣವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂತಾ ಆನಾ ಗಾಳಿಯ ಪರಿಣಾ ಉಂಟಾದ ‘ಕಾಳ್ಗಿಚ್ಚು ತೀವ್ರವಾಗಿ ವ್ಯಾಪಿಸುತ್ತಿದೆ’ ಎಂದು ಹಾಲಿವುಡ್ ಹಿಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಹಾಲಿವುಡ್ ಸಿನಿ ರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಹಾಲಿವುಡ್ ಹಿಲ್ಸ್‌ನಲ್ಲಿ ಇರುವ ಹಾಲಿವುಡ್‌ನ ಹಲವು ಸಿನಿ ತಾರೆಯರ ಕೋಟಿ ಕೋಟಿ ವೆಚ್ಚದ ಮನೆಗಳು ಸುಟ್ಟು ಭಸ್ಮವಾದವು. ನೂರಾರು ಸಿನಿ ತಾರೆಯರು ತಮ್ಮ ಮನೆಗಳನ್ನು ತೊರೆದು ಓಡಿದರು. ವಾಹನ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.