ಪ್ಯಾರಿಸ್, ಹನೋಯಿ: ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ವಿಮಾನದಿಂದ ಕೆಳಗಿಳಿಯುವ ವೇಳೆ ಅವರ ಪತ್ನಿ ಬ್ರಿಜೆಟ್ ಮ್ಯಾಕ್ರನ್ ಮುಖಕ್ಕೆ ತಿವಿದಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವ್ಯಾಪಕವಾಗಿ ಹರಿದಾಡಿದೆ. ಇದು ದಂಪತಿ ನಡುವಣ ಜಗಳ ಎಂದು ಮ್ಯಾಕ್ರನ್ ಅವರ ಆಪ್ತರೊಬ್ಬರು ಹೇಳಿದ್ದಾರೆ.
ಈ ಬೆಳವಣಿಗೆಯನ್ನು ತಳ್ಳಿಹಾಕಿರುವ ಮ್ಯಾಕ್ರನ್, ‘ಪತ್ನಿ ತಮಾಷೆ ಮಾಡುತ್ತಿದ್ದಳು. ನಮ್ಮ ಸಂಬಂಧ ಉತ್ತಮವಾಗಿದೆ. ಯಾವುದೇ ರೀತಿಯ ಕಲಹ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಯೆಟ್ನಾಂನಲ್ಲಿ ವಿಮಾನದಿಂದ ಇಳಿಯುವ ಮುನ್ನ ಬಾಗಿಲು ತೆರೆದ ಕೆಲವೇ ಕ್ಷಣಗಳಲ್ಲಿಯೇ ಈ ಘಟನೆ ನಡೆದಿದೆ. ಮ್ಯಾಕ್ರನ್ ಅವರು ಕ್ಷಣಕಾಲ ಇರುಸುಮುರುಸು ಒಳಗಾದರು. ತಕ್ಷಣವೇ ಚೇತರಿಸಿಕೊಂಡು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಲು ಆಗಮಿಸಿದ್ದ ಅಧಿಕಾರಿಗಳತ್ತ ಕೈಬೀಸಿದರು.
ಅಧ್ಯಕ್ಷರ ಹಾಗೂ ಪತ್ನಿಯ ನಡವಳಿಕೆ ವಿಚಾರವನ್ನು ಫ್ರಾನ್ಸ್‌ನ ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ. ಕೆಲವು ಮಾಧ್ಯಮಗಳು ಮ್ಯಾಕ್ರನ್ ಅವರಿಗೆ ಪತ್ನಿಯಿಂದ ಕಪಾಳ ಮೋಕ್ಷವಾಗಿದೆ ಎಂದು ವರದಿ ಮಾಡಿವೆ.
‘ಕಪಾಳ ಮೋಕ್ಷವೇ– ಜಗಳವೇ’ ಎಂದು ಪ್ರಶ್ನಿಸಿ ‘ಲೆ ಪರಿಸಿಯಾನ್’ ವೆಬ್‌ಸೈಟ್ ವರದಿ ಮಾಡಿದೆ.
ಎಮಾನ್ಯುಯೆಲ್ ಮ್ಯಾಕ್ರನ್ ಅವರು, ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಬ್ರಿಜೆಟ್ ಶಿಕ್ಷಕಿಯಾಗಿದ್ದರು. ಮ್ಯಾಕ್ರನ್ ಅವರಿಗೆ 47 ವರ್ಷವಾಗಿದ್ದು, ಬ್ರಿಜೆಟ್ ಅವರಿಗೆ 72 ವರ್ಷಗಳಾಗಿವೆ.
ಮೂರು ಮಕ್ಕಳ ತಾಯಿಯಾಗಿದ್ದ ಬ್ರಿಜೆಟ್, ಪತಿಗೆ ವಿಚ್ಛೇದನ ನೀಡಿ ಮ್ಯಾಕ್ರನ್ ಅವರನ್ನು 2007ರಲ್ಲಿ ವಿವಾಹವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.